
ಬೆಂಗಳೂರು, 13 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಬೆಳಗಾವಿ ಚಳಿಗಾಲದ ಅಧಿವೇಶನವು ಯಾವುದೇ ಸಾರ್ವಜನಿಕ ಪ್ರಯೋಜನ ನೀಡದೇ ಸಂಪೂರ್ಣವಾಗಿ ವ್ಯರ್ಥವಾಗಿದೆ ಎಂದು ರಾಜ್ಯ ಬಿಜೆಪಿ ಘಟಕ ತೀವ್ರವಾಗಿ ಆರೋಪಿಸಿದೆ.
ಅಧಿವೇಶನದಲ್ಲಿ ರೈತರ ಸಂಕಷ್ಟಗಳಿಗೆ ಯಾವುದೇ ಸ್ಪಷ್ಟ ಪರಿಹಾರ ಕಂಡುಬಂದಿಲ್ಲ, ನೀರಾವರಿ ಯೋಜನೆಗಳ ಕುರಿತು ಸಮಗ್ರ ಚರ್ಚೆ ನಡೆಯಲಿಲ್ಲ, ಜ್ವಲಂತ ಸಮಸ್ಯೆಗಳು ಮತ್ತು ಜನಸಾಮಾನ್ಯರ ದೈನಂದಿನ ತೊಂದರೆಗಳ ಬಗ್ಗೆ ಗಮನ ಹರಿಸಲಿಲ್ಲ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದ ಮಹತ್ವದ ವಿಷಯಗಳು ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾದವು ಎಂದು ಆರೋಪಿಸಿದೆ.
ಅಧಿವೇಶನವು ಕೇವಲ ಬ್ರೇಕ್‌ಫಾಸ್ಟ್, ಲಂಚ್ ಮತ್ತು ಡಿನ್ನರ್ ಸಭೆಗಳಿಗೆ, ಕಾಂಗ್ರೆಸ್ ಪಕ್ಷದ ಒಳಾಂಗಣ ನಾಯಕತ್ವ ಗೊಂದಲಕ್ಕೆ, ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಹೇಳಿಕೆಗಳು ಮತ್ತು ರಾಜಕೀಯ ಕಿತ್ತಾಟಕ್ಕೆ ಮಾತ್ರ ಸೀಮಿತವಾಯಿತು ಎಂದು ಬಿಜೆಪಿ ಟೀಕಿಸಿದೆ.
ಸದ್ಯ ದುರಾಡಳಿತ ಮತ್ತು ಭ್ರಷ್ಟಾಚಾರಕ್ಕೆ ಹೆಸರಾಗಿರುವ ಕಾಂಗ್ರೆಸ್ ಸರ್ಕಾರದಲ್ಲಿ ‘ಯಾರು ಮುಖ್ಯಮಂತ್ರಿ ಸ್ಥಾನ ತ್ಯಜಿಸಬೇಕು, ಯಾರು ಮುಂದುವರಿಯಬೇಕು’ ಎಂಬ ಆಂತರಿಕ ಚರ್ಚೆಗಳೇ ಮೇಲುಗೈ ಸಾಧಿಸಿರುವ ಹಿನ್ನೆಲೆಯಲ್ಲಿ, ಚಳಿಗಾಲದ ಅಧಿವೇಶನವು ಅಕ್ಷರಶಃ ಜನವಿರೋಧಿಯಾಗಿ ಮಾರ್ಪಟ್ಟಿದೆ ಎಂದು ಬಿಜೆಪಿ ಆರೋಪಿಸಿದೆ.
ನಾಡಿನ ರೈತರ ಕಷ್ಟಗಳು, ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಉತ್ತರ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಪರಿಹಾರ ಹುಡುಕಬೇಕಿದ್ದ ಸರ್ಕಾರ, ಆಂತರಿಕ ಕಚ್ಚಾಟದಲ್ಲಿ ಮುಳುಗಿರುವುದು ಅತ್ಯಂತ ದುರಂತಕರ ಸಂಗತಿ ಎಂದು ರಾಜ್ಯ ಬಿಜೆಪಿ ಘಟಕ ಸಾಮಾಜಿಕ ಮಾಧ್ಯಮದಲ್ಲಿ ಕಿಡಿಕಾರಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa