
ನವದೆಹಲಿ, 01 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಸಂಸತ್‌ನ ಚಳಿಗಾಲದ ಅಧಿವೇಶನ ಇಂದು ಆರಂಭವಾಗಲಿದ್ದು ಡಿಸೆಂಬರ್ 19ರವರೆಗೆ 19 ದಿನಗಳ ಅವಧಿಯಲ್ಲಿ 15 ಕಲಾಪಗಳು ನಡೆಯಲಿವೆ. ಆರಂಭದಲ್ಲೇ ರಾಜಕೀಯ ವಾಕ್ಸಮರ ನಡೆಯುವ ಸೂಚನೆಗಳು ಕಂಡು ಬಂದಿವೆ.
ಆಡಳಿತಾರೂಢ ಎನ್‌ಡಿಎ ಸರ್ಕಾರ ಗಾಂಧಿ ಕುಟುಂಬದ ವಿರುದ್ಧ ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ಹೊಸ ಎಫ್‌ಐಆರ್‌ನ್ನು ಅಸ್ತ್ರವನ್ನಾಗಿಸಿಕೊಳ್ಳಲು ಸಜ್ಜಾಗಿದ್ದರೆ, ಇತ್ತ ಪ್ರತಿಪಕ್ಷಗಳು ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಅಭಿಯಾನದ ಅಕ್ರಮಗಳನ್ನು ಸದನದಲ್ಲಿ ಬಯಲು ಮಾಡಲು ತಯಾರಾಗಿವೆ.
ತೃಣಮೂಲ ಕಾಂಗ್ರೆಸ್, ಡಿಎಂಕೆ, ಸಮಾಜವಾದಿ ಪಕ್ಷಗಳು ಎಸ್ಐಆರ್ ಪರಿಷ್ಕರಣೆಯನ್ನು ಪ್ರಶ್ನಿಸಲು ನಿರ್ಧರಿಸಿದ್ದು, ಚುನಾವಣಾ ಆಯೋಗದ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರದ ರಾಜಕೀಯ ಹಸ್ತಕ್ಷೇಪವಿದೆ ಎಂಬ ಆಪಾದನೆಗಳನ್ನೂ ಎತ್ತಿ ಹೇಳಲು ಉದ್ದೇಶಿಸಿವೆ.
ಕಾಂಗ್ರೆಸ್ ಪಕ್ಷವು ಆಪರೇಷನ್ ಸಿಂಧೂರ ಸಮಯದಲ್ಲಿ ಭಾರತ–ಪಾಕಿಸ್ತಾನ ನಡುವೆ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸುವ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಪುನರಾವರ್ತಿತ ಹೇಳಿಕೆಗಳನ್ನೂ ಚರ್ಚೆಗೆ ತರಲು ತೀರ್ಮಾನಿಸಿದೆ. ಜೊತೆಗೆ ದೆಹಲಿಯ ಸ್ಫೋಟ ಮತ್ತು ಮಾಲಿನ್ಯ ಪರಿಸ್ಥಿತಿಯ ಕುರಿತಾಗಿಯೂ ಚರ್ಚೆ ನಡೆಯುವ ಸಾಧ್ಯತೆಗಳಿವೆ.
ಈ ಅಧಿವೇಶನದಲ್ಲಿ ಆರೋಗ್ಯ ಭದ್ರತೆ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಮಸೂದೆ, ಮಣಿಪುರ, ಜಿಎಸ್‌ಟಿ (ಎರಡನೇ ತಿದ್ದುಪಡಿ) ಮಸೂದೆ ಮತ್ತು ಕೇಂದ್ರ ಅಬಕಾರಿ ತಿದ್ದುಪಡಿ ಮಸೂದೆ ಸೇರಿದಂತೆ ಹಲವು ಪ್ರಮುಖ ಶಾಸನಾತ್ಮಕ ವಿಧೇಯಕಗಳನ್ನು ಮಂಡಿಸಲು ರಾಷ್ಟ್ರಪತಿ ಶಿಫಾರಸು ಮಾಡಿದ್ದಾರೆ.
ಜನ್ ವಿಶ್ವಾಸ್ ಮಸೂದೆ, ದಿವಾಳಿತನ ಸಂಹಿತೆ ತಿದ್ದುಪಡಿ, ರಾಷ್ಟ್ರೀಯ ಹೆದ್ದಾರಿಗಳು ತಿದ್ದುಪಡಿ, ಅಣುಶಕ್ತಿ ಮಸೂದೆ, ಕಾರ್ಪೊರೇಟ್ ಮತ್ತು ವಿಮಾ ಕಾನೂನುಗಳ ತಿದ್ದುಪಡಿ ಸೇರಿದಂತೆ ಅನೇಕ ಮಸೂದೆಗಳನ್ನೂ ಈ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಗಳಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa