





ಕೊಪ್ಪಳ, 01 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಇಂದು ಮತ್ತು ನಾಳೆ ಅಂಜನಾದ್ರಿಯಲ್ಲಿ ನಡೆಯಲಿರುವ ಹನುಮಮಾಲ ಕಾರ್ಯಕ್ರಮಕ್ಕೆ ಬರುವ ಭಕ್ತರಿಗೆ ಯಾವುದೇ ಸಮಸ್ಯೆಗಳಾಗದಂತೆ ನಮ್ಮ ಅಧಿಕಾರಿಗಳು ಎಲ್ಲಾ ಕೆಲಸ ಮತ್ತು ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.
ಅವರು ಸೋಮವಾರ ಅಂಜನಾದ್ರಿಯಲ್ಲಿ ಡಿಸೆಂಬರ್ 2 ಮತ್ತು 3 ರಂದು ನಡೆಯಲಿರುವ ಹನುಮಮಾಲ ಕಾರ್ಯಕ್ರಮದ ಅಂತಿಮ ಸಿದ್ದತೆಗಳ ಪರಿಶೀಲನೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿ ಮಾತನಾಡಿದರು.
ಕೊಪ್ಪಳ ಜಿಲ್ಲಾಡಳಿತ ವತಿಯಿಂದ ವಿವಿಧ ಸಮಿತಿಗಳನ್ನು ರಚಿಸಿ ಈ ಕಾರ್ಯಕ್ರಮದ ಯಶಸ್ವಿಗಾಗಿ ಹಲವಾರು ದಿನಗಳಿಂದ ತಯಾರಿ ಮಾಡಲಾಗಿದೆ. ಆಂಜನೇಯ ಜನ್ಮಸ್ಥಳ ಅಂಜನಾದ್ರಿಗೆ ಪ್ರತಿವರ್ಷದಂತೆ ಈ ವರ್ಷವು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಇರುವುದರಿಂದ ಅವರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಡಿಸೆಂಬರ್ 2 ರಂದು ಪಾರ್ಕಿಂಗ್ ಸ್ಥಳಗಳಲ್ಲಿಯೇ ಅನ್ನ ಸಾಂಭಾರ ಊಟದ ವ್ಯವಸ್ಥೆ ಮಾಡಲಾಗಿರುತ್ತದೆ. ಡಿಸೆಂಬರ್ 3 ರಂದು ಬೆಳಿಗ್ಗೆಯಿಂದಲೇ ವೇದಪಾಠ ಶಾಲೆಯಲ್ಲಿ ಗೋಧಿ ಹುಗ್ಗಿ ಮತ್ತು ಅನ್ನಸಾಂಬರಿನ ಪ್ರಸಾದ ವ್ಯವಸ್ಥೆ ಇರಲಿದೆ ಎಂದರು.
ಈ ಭಾರಿ ಪ್ಲಾಸ್ಟಿಕ್ ಬ್ಯಾನ್ ಮಾಡಿರುವುದರಿಂದ ಅವುಗಳನ್ನು ಚೆಕಪೋಸ್ಟಗಳಲ್ಲಿಯೆ ತೆಗೆದು ಹಾಕಲು ಅಧಿಕಾರಿಗಳಿಗೆ ನಿರ್ದೆಶನ ನೀಡಲಾಗಿದ್ದು, ಸಾರ್ವಜನಿಕರು ಪ್ಲಾಸ್ಟಿಕ್ ಬಳಸಿ ಎಲ್ಲೆಂದರಲ್ಲಿ ಬಿಸಾಕುವುದನ್ನು ಮಾಡಬಾರದು. ಸ್ನಾನದ ನಂತರ ಜನರು ಬಟ್ಟೆಗಳನ್ನು ನಿಗದಿಪಡಿಸಿದ ಸ್ಥಳಗಳಲ್ಲಿ ಹಾಕಬೇಕು. ಸಾರ್ವಜನಿಕರ ವಾಹನಗಳ ನಿಲುಗಡೆಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಮಾಲಾಧಾರಿಗಳಿಗೆ ಸ್ನಾನ ಮತ್ತು ಕುಡಿಯುವ ನೀರಿಗೆ ನೀರಿನ ನಲ್ಲಿ ಮತ್ತು ಶ್ಯಾವರಗಳನ್ನು ಅಳವಡಿಸಲಾಗಿದೆ ಎಂದರು.
ಕಾರ್ಯಕ್ರಮಕ್ಕೆ ಬರುವ ಭಕ್ತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದ0ತೆ ಮುಂಜಾಗ್ರತೆ ವಹಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ, ಒಟ್ಟು 7 ವೈದ್ಯರ ತಂಡವನ್ನು ರಚಿಸಿದ್ದು, ಪಾದಗಟ್ಟಿ ಹತ್ತಿರ ಒಂದು, ಬೆಟ್ಟ ಹತ್ತುವಾಗ ಮಧ್ಯದಲ್ಲಿ ಒಂದು, ದೇವಸ್ಥಾನದ ಹತ್ತಿರ ಒಂದು ತಂಡ ಹಾಗೂ ಕೆಳಗೆ ಇಳಿಯುವಾಗ ಮಧ್ಯದಲ್ಲಿ ಒಂದು ಮತ್ತು ಕೆಳಗೆ ಒಂದು ತಂಡ, ವೇದ ಪಾಠ ಶಾಲೆ ಹತ್ತಿರ, ಪ್ರಾಥಮಿಕ ಆರೋಗ್ಯ ಕೇಂದ್ರದ ಹತ್ತಿರ ಹೀಗೆ ಒಂದೊಂದು ವೈದ್ಯರ ತಂಡವು ದಿನದ 24 ಗಂಟೆಗಳ ಕಾಲ ಸರತಿ ಪಾಳೆಯದಲ್ಲಿ ಕಾರ್ಯ ನಿರ್ವಹಿಸಲಿದ್ದು, 3 ಆಂಬುಲೇನ್ಸ್ಗಳ ವ್ಯವಸ್ಥೆಯನ್ನು ಸಹ ಮಾಡಲಾಗಿರುತ್ತದೆ ಎಂದು ಹೇಳಿದರು.
ಜನರಿಗೆ ಸ್ಥಳಗಳ ಬಗ್ಗೆ ಮಾಹಿತಿ ತಿಳಿಯಲು ಎಲ್ಲಾ ಕಡೆ ಬೋರ್ಡಗಳನ್ನು ಹಾಕುವುದರ ಜೊತೆಗೆ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಹನುಮಮಾಲಾ ವಿಸರ್ಜನೆ ಕಾರ್ಯಕ್ರಮಕ್ಕೆ ಬರುವ ಭಕ್ತಾದಿಗಳು ಮತ್ತು ಸಾರ್ವಜನಿಕರಿಗೆ ವಿವಿಧ ಸ್ಥಳಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಕೊಪ್ಪಳ ಜಿಲ್ಲಾ ಪೋಲಿಸ್ ಇಲಾಖೆ ವತಿಯಿಂದ https://koppal-police.github.io/hanumamala-route-map-2025/ ವೆಬ್‌ಸೈಟ್ ಅನಾವರಣ ಮಾಡಲಾಗಿದ್ದು, ಇದರ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಅವರು ಮಾತನಾಡಿ ಕಾರ್ಯಕ್ರಮಕ್ಕೆ ಎಲ್ಲಾ ಕಡೆ ಸೆಕ್ಯುರಿಟಿ ಅರೆಂಜಮೆಂಟ ಮಾಡಲಾಗಿದೆ. ಪಾರ್ಕಿಂಗ್ ಸ್ಥಳಗಳು. ಬ್ಯಾರಿಕೆಡ್. ಸಿಸಿಟಿವಿಗಳನ್ನು ಅಳವಡಿಸುವುದರ ಜೊತೆಗೆ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ವಾಹನಗಳು ಗಂಗಾವತಿ ನಗರದ ಕಡೆ ಹೋಗದೆ, ಕಡೆ ಬಾಗಿಲು ಮತ್ತು ಮುನಿರಾಬಾದಿನಿಂದ ಬರುವ ವಾಹನಗಳು ಪಾರ್ಕಿಂಗೆ ನಿಗದಿಪಡಿಸಿದ ಸ್ಥಳಗಳಲ್ಲಿ ನಿಲ್ಲಿಸಬೇಕು. ಜನರಿಗೆ ಕಾರ್ಯಕ್ರಮದ ಮಾಹಿತಿ ನೀಡಲು ಆ್ಯಪ್ ಲೋಕಾರ್ಪಣೆ ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಅವರು ಮಾತನಾಡಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಭಕ್ತಾಧಿಗಳಿಗಾಗಿ ಕುಡಿಯುವ ನೀರಿನ ವ್ಯವಸ್ಥೆ, ಸ್ನಾನದ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ನಿರ್ದೆಶನದಂತೆ ಪ್ಲಾಸ್ಟಿಕ್ ಫ್ರೀ ವ್ಯವಸ್ಥೆ ಮಾಡಿದ್ದು ಯಾರು ಪ್ಲಾಸ್ಟಿಕ್ ಬಾಟಲಗಳನ್ನು ತೆಗೆದುಕೊಂಡು ಬರಬಾರದು ಎಂದು ಹೇಳಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲಾ ಅವರು ಮಾತನಾಡಿ, ಒಂದು ವಾರದ ಹಿಂದೆ ಚಿಕ್ಕರಾಂಪೂರ ಮತ್ತು ಆನೆಗುಂದಿಯಲ್ಲಿ ಒಂದೊಂದು ಚಿರತೆಗಳನ್ನು ಹಿಡಿದು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಇಲ್ಲಿನ ಬೆಟ್ಟ ಮತ್ತು ಗುಡ್ಡಗಳಲ್ಲಿ ಚಿರತೆ ಮತ್ತು ಕರಡಿಗಳ ಆವಾಸ ಸ್ಥಾನ ಇರುವುದರಿಂದ ಹನುಮಮಾಲಾಧಾರಿಗಳು ಒಬ್ಬೊಬ್ಬರಾಗಿ ಬೆಟ್ಟ ಗುಡ್ಡಗಳ ಕಡೆಗೆ ಹೋಗಭಾರದು. ಈಗಾಗಲೇ ಮುಂಜಾಗ್ರತೆಯಾಗಿ ನಮ್ಮ ಇಲಾಖೆಯ ಸಿಬ್ಬಂದಿಗಳು ಎಲ್ಲಾ ಕಡೆ ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಆರ್. ಹೇಮಂತಕುಮಾರ್, ಸಹಾಯಕ ಆಯುಕ್ತರಾದ ಕ್ಯಾ. ಮಹೇಶ್ ಮಾಲಗಿತ್ತಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕರಾದ ಅಜ್ಜಪ್ಪ ಸೊಗಲದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಟಿ. ಲಿಂಗರಾಜು, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೆಶಕರಾದ ನಾಗರಾಜ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೆಶಕರಾದ ಮಂಜುನಾಥ ಗುಂಡೂರ್, ಗಂಗಾವತಿ ತಹಶಿಲ್ದಾರ ಯು. ನಾಗರಾಜ, ಕಾರಟಗಿ ತಹಶೀಲ್ದಾರ ವಿಶ್ವನಾಥ ಮುರಡಿ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್