ಇಂದಿರಾ ಆಹಾರ ಕಿಟ್ ಯೋಜನೆ ಗುಣಮಟ್ಟದಲ್ಲಿ ರಾಜಿ ಇಲ್ಲ : ಮುಖ್ಯಮಂತ್ರಿ
ಬೆಂಗಳೂರು, 01 ಡಿಸೆಂಬರ್ (ಹಿ.ಸ.) : ಆ್ಯಂಕರ್ : ರಾಜ್ಯದ ಇಂದಿರಾ ಆಹಾರ ಕಿಟ್ ಯೋಜನೆಯನ್ನು ಪಾರದರ್ಶಕವಾಗಿ ಹಾಗೂ ಗುಣಮಟ್ಟದ ಮಟ್ಟದಲ್ಲಿ ಯಾವುದೇ ರೀತಿಯ ರಾಜಿ ಇಲ್ಲದೆ ಜಾರಿಗೆ ತರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಕಾವೇರಿ ನಿವಾಸದಲ್ಲಿ ಇಂದ
Meeting


ಬೆಂಗಳೂರು, 01 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ರಾಜ್ಯದ ಇಂದಿರಾ ಆಹಾರ ಕಿಟ್ ಯೋಜನೆಯನ್ನು ಪಾರದರ್ಶಕವಾಗಿ ಹಾಗೂ ಗುಣಮಟ್ಟದ ಮಟ್ಟದಲ್ಲಿ ಯಾವುದೇ ರೀತಿಯ ರಾಜಿ ಇಲ್ಲದೆ ಜಾರಿಗೆ ತರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕಾವೇರಿ ನಿವಾಸದಲ್ಲಿ ಇಂದು ನಡೆದ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತು.

ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ನೀಡಲಾಗುತ್ತಿದ್ದ ಹೆಚ್ಚುವರಿ 5 ಕೆ.ಜಿ. ಅಕ್ಕಿಗೆ ಪರ್ಯಾಯವಾಗಿ, ತೊಗರಿ ಬೇಳೆ, ಸೂರ್ಯಕಾಂತಿ ಎಣ್ಣೆ, ಸಕ್ಕರೆ ಹಾಗೂ ಉಪ್ಪನ್ನು ಒಳಗೊಂಡ ಇಂದಿರಾ ಆಹಾರ ಕಿಟ್ ವಿತರಣೆ ಮಾಡಲು ಸಂಪುಟ ಈಗಾಗಲೇ ಅನುಮೋದನೆ ನೀಡಿದೆ. ಕುಟುಂಬದ ಸದಸ್ಯರ ಸಂಖ್ಯೆಗನುಸಾರ ಈ ಕಿಟ್ ವಿತರಣೆ ಮಾಡುವ ವ್ಯವಸ್ಥೆ ಇರಲಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಪ್ರತಿ ತಿಂಗಳು 1,25,08,262 ಇಂದಿರಾ ಆಹಾರ ಕಿಟ್‌ಗಳ ಅಗತ್ಯವಿದ್ದು, ಯೋಜನೆ ಜಾರಿಗೆ ₹466 ಕೋಟಿ ವೆಚ್ಚವಾಗಲಿದೆ ಎಂಬ ಅಂದಾಜು ಅಧಿಕಾರಿಗಳಿಂದ ಮಂಡನೆಯಾಯಿತು. ಇದರಡಿ ತಿಂಗಳಿಗೆ 18,628 ಮೆಟ್ರಿಕ್ ಟನ್ ತೊಗರಿ ಬೇಳೆ, 12,419 ಮೆಟ್ರಿಕ್ ಟನ್ ಸೂರ್ಯಕಾಂತಿ ಎಣ್ಣೆ, ಇದೇ ಪ್ರಮಾಣದ ಸಕ್ಕರೆ ಮತ್ತು ಉಪ್ಪು ಅಗತ್ಯವಿರುವುದಾಗಿ ವಿವರಿಸಲಾಯಿತು.

ಆಹಾರ ಕಿಟ್‌ನಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು ತೊಗರಿ ಬೇಳೆಯನ್ನು ಗರಿಷ್ಠ ಪ್ರಮಾಣದಲ್ಲಿ ಸೇರಿಸಬೇಕು ಎಂದು ಸಿದ್ದರಾಮಯ್ಯ ಸೂಚಿಸಿದರು. ನಾಫೆಡ್ ಮತ್ತು ಎನ್ಸಿಸಿಎಫ್ ಮೊದಲಾದ ಕೇಂದ್ರ ಸರಬರಾಜು ಸಂಸ್ಥೆಗಳ ಮೂಲಕ ಅಥವಾ ಕೆಟಿಪಿಪಿ ನಿಯಮಾನುಸಾರ ಪಾರದರ್ಶಕ ಟೆಂಡರ್ ಪ್ರಕ್ರಿಯೆಯಿಂದ ವಸ್ತುಗಳನ್ನು ಖರೀದಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು. “ಯಾವುದೇ ಕಾರಣಕ್ಕೂ ಗುಣಮಟ್ಟದಲ್ಲಿ ರಾಜಿ ಬೇಡ, ಅಳತೆಯಲ್ಲಿ ಹೆಚ್ಚು–ಕಡಿಮೆ ಆಗದಂತೆ ಕಡ್ಡಾಯ ಎಚ್ಚರಿಕೆ ವಹಿಸಬೇಕು,” ಎಂದು ಅವರು ಹಿರಿಯ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.

ಫುಡ್ ಕಿಟ್ ವಿತರಣೆಯಲ್ಲಿ ಡಿಜಿಟಲ್ ಪಾರದರ್ಶಕತೆಗಾಗಿ ಪ್ರತಿ ನ್ಯಾಯಬೆಲೆ ಅಂಗಡಿಗಳಲ್ಲಿ ಕ್ಯೂಆರ್ ಸ್ಕ್ಯಾನ್ ವ್ಯವಸ್ಥೆ ಅಳವಡಿಸಲು ಮುಖ್ಯಮಂತ್ರಿಗಳು ಸೂಚನೆ ನೀಡಿದರು. ಸರಬರಾಜಾದ ಕಿಟ್‌ಗಳನ್ನು ನಿಗಮದ ಗೋದಾಮುಗಳು ಮತ್ತು ಸಗಟು ಮಳಿಗೆಗಳ ಮೂಲಕ ಪ್ರತಿ ತಿಂಗಳು 10ರೊಳಗಾಗಿ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ತಲುಪಿಸುವಂತೆ ಆದೇಶಿಸಲಾಯಿತು.

ಸಭೆಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ. ಹೆಚ್. ಮುನಿಯಪ್ಪ, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande