
ಬೆಂಗಳೂರು, 01 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ದಕ್ಷ ಆಡಳಿತಗಾರರಾಗಿದ್ದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಆದರ್ಶಗಳ ಹಾದಿಯಲ್ಲಿ ಸರ್ಕಾರ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ವಿಧಾನ ಸೌಧದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯ ಅವರ ಪುಣ್ಯತಿಥಿಯ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಇಂದು ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯ ಅವರ ಪುಣ್ಯತಿಥಿಯಂದು ಸರ್ಕಾರದ ವತಿಯಿಂದ ಗೌರವ ಸಲ್ಲಿಸಲಾಗುತ್ತಿದೆ. ಕೆಂಗಲ್ ಹನುಮಂತಯ್ಯನವರು ಒಬ್ಬ ದಕ್ಷ ಆಡಳಿತಗಾರರಾಗಿದ್ದು, ಕರ್ನಾಟಕದ ಎರಡನೇ ಮುಖ್ಯಮಂತ್ರಿಯಾಗಿದ್ದರು. ಸ್ವಾತಂತ್ರ್ಯ ನಂತರವಿದ್ದ ಸಮಸ್ಯೆಗಳನ್ನು ಮುಖ್ಯಮಂತ್ರಿಯಾಗಿ ಸಮರ್ಥವಾಗಿ ಎದುರಿಸಿದರು.
ವಿಧಾನ ಸೌಧದ ಭವ್ಯ ಕಟ್ಟಡ ನಿರ್ಮಾಣಕ್ಕೆ ಅವರು ರೂವಾರಿಯಾಗಿದ್ದರೂ, ಕಟ್ಟಡದ ಉದ್ಘಾಟನೆಯ ವೇಳೆಗೆ ಅವರು ಅಧಿಕಾರದಲ್ಲಿರಲಿಲ್ಲ. ಜನಪ್ರತಿನಿಧಿಯಾಗಿ ಪ್ರಮಾಣಿಕ ಜನರ ಸೇವೆ ಸಲ್ಲಿಸುವುದು ಅತಿಮುಖ್ಯ ಎಂದು ವಿಧಾನ ಸೌಧದ ಕಟ್ಟಡದ ಪೂರ್ವಭಾಗದಲ್ಲಿ’ಜನರ ಕೆಲಸ ದೇವರ ಕೆಲಸ’ ಎಂದು ಕೆತ್ತಲಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಕೆಂಗಲ್ ಹನುಮಂತಯ್ಯ ಅವರ ಸೇವೆಯನ್ನು ಸರ್ಕಾರ ಸ್ಮರಿಸುತ್ತಿದೆ. ಅವರ ಆದರ್ಶಗಳ ಹಾದಿಯಲ್ಲಿ ನಡೆಯುವ ಪ್ರಯತ್ನವನ್ನು ಸರ್ಕಾರ ಮಾಡಲಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa