


ಬಳ್ಳಾರಿ, 01 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ನಾನು, ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಿಮ್ಮೆಲ್ಲರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದುಕೊಂಡಿದ್ದೇನೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವೆರು ತಿಳಿಸಿದ್ದಾರೆ.
ಬಸವೇಶ್ವರ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ, ಸುದ್ದಿಗಾರರ ಜೊತೆಯಲ್ಲಿ ಮಾತನಾಡಿದ ಅವರು, ಮೂರು ಹಂತಗಳಲ್ಲಿ ಒಟ್ಟು 84 ಕೋಟಿ ರೂ.ಗಳ ಅನುದಾನವನ್ನು ಬಳ್ಳಾರಿ ವಿಧಾನಸಭಾ ಕ್ಷೇತ್ರಕ್ಕೆ ತಂದಿರುವೆ. ಹಂತ ಹಂತವಾಗಿ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಬೆಳಗಾವಿ ಅಧಿವೇಶನದ ನಂತರ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತದೆ. ಅಲ್ಲದೇ, ಬಳ್ಳಾರಿಯನ್ನು `ಸುವರ್ಣ ಬಳ್ಳಾರಿ'ಯನ್ನಾಗಿ ರೂಪಾಂತರಿಸಲಾಗುತ್ತದೆ ಎಂದರು.
ಬಳ್ಳಾರಿ ನಗರದಲ್ಲಿ ಪ್ರಸ್ತುತ ನಡೆದಿರುವ ಕಾಮಗಾರಿಗಳ ಕಾರಣ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆಯಾಗಿದೆ. ಈ ತೊಂದರೆ - ಅನಾನುಕೂಲ ಅಲ್ಪಕಾಲದಲ್ಲಿಯೇ ಕೊನೆಗೊಳ್ಳಲಿದೆ. ಮುಂದಿನ ಆರು ತಿಂಗಳಲ್ಲಿ ಬಳ್ಳಾರಿಯನ್ನು ಅಭಿವೃದ್ಧಿಯ ಹೊಸತನಕ್ಕೆ ಸ್ಪಷ್ಟವಾದ ಚಿತ್ರಣ ಸಿಗಲಿದೆ ಎಂದರು.
ಜನವರಿ 3, 2026 ರಂದು ವಾಲ್ಮೀಕಿ ವೃತ್ತದಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ ಅವರ ನೂತನ ಪುತ್ಥಳಿಯನ್ನು ವಾಲ್ಮೀಕಿ ಸಮಾಜದವರ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಲಾಗುತ್ತದೆ. ಕರ್ನಾಟಕ ವಾಲ್ಮೀಕಿ ಸಮಾಜದ ಮುಖಂಡರು - ಗಣ್ಯರು ಮತ್ತು ಸಾಧಕರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತದೆ ಎಂದರು.
ಬಳ್ಳಾರಿ ಮಹಾನಗರ ಪಾಲಿಕೆಯ 23ನೇ ವಾರ್ಡಿನ ಮಹಾನಂದಿಕೊಟ್ಟಂನಲ್ಲಿ ಮಹಾತ್ಮ ಗಾಂಧಿ ನಗರ ಯೋಜನೆ ಅಡಿ 2.50 ಕೋಟಿ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ,
21ನೇ ವಾರ್ಡಿನ ಬಸವೇಶ್ವರ ನಗರದಲ್ಲಿ ಅಂದಾಜು 4 ಕೋಟಿ ರೂ.ಗಳ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ, 15ನೇ ವಾರ್ಡಿನ ವಡ್ಡರ ಬಂಡೆಯ ಬಳಿ ಅಂದಾಜು ವೆಚ್ಚ 2 ಕೋಟಿ ರೂ.ಗಳಲ್ಲಿ, ವಾರ್ಡ್ ಸಂಖ್ಯೆ 16ರ ಶ್ರೀರಾಂಪುರ ಕಾಲೋನಿಯಲ್ಲಿ 2.80 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಸೋಮವಾರ ನೆರವೇರಿಸಿದ್ದಾರೆ.
ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಪಿ. ಗಾದೆಪ್ಪ, ಉಪ ಮೇಯರ್ ಮುಬೀನಾಬೀ, ಪಾಲಿಕೆಯ ಆಯುಕ್ತ ಪಿ.ಎಸ್. ಮಂಜುನಾಥ, ಮಾಜಿ ಮೇಯರ್ ಎಂ. ರಾಜೇಶ್ವರಿ, ಸದಸ್ಯರಾದ ಸುರೇಖಾಗೌಡ, ನೂರ್ ಮೊಹಮ್ಮದ್, ಟಿ.ವಿ. ಪ್ರಸಾದ್, ಕಾಂಗ್ರೆಸ್ ವಕ್ತಾರ ವೆಂಕಟೇಶ ಹೆಗಡೆ, ಸೋಮಶೇಖರ್, ಚಾನಾಳ್ ಶೇಖರ್, ಗೋನಾಳ ನಾಗಭೂಷಣ, ಯಾಳ್ಪಿ ಪಂಪನಗೌಡ, ಬಿಸಿಲಹಳ್ಳಿ ಮಂಜು, ಮಂಜು ಬೆಳ್ಳಿಗಾರ, ಶಂಕರ್, ಹಿರೇಮಠ, ಗೌತಮ್, ಖಾದರ್, ಬಿಆರೆಲ್. ಸೀನಾ, ಬಾಲರಾಜು, ಚರಣ್ ಸೇರಿ ಅನೇಕರು ಈ ಸಂದರ್ಭದಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್