
ಹಾಸನ, 01 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಹೆಚ್.ಐ.ವಿ ಪೀಡಿತರನ್ನು ನಿರ್ಲಕ್ಷ್ಯ ಮಾಡಿ, ತುಚ್ಛವಾಗಿ ನೋಡುವ ಬದಲು, ಅವರು ಕೂಡ ಸಮಾಜದಲ್ಲಿ ಒಬ್ಬರು ಎಂದು ಭಾವಿಸಿ, ಧೈರ್ಯ ತುಂಬಿ ವೈದ್ಯಕೀಯ ತಪಾಸಣೆ ಪಡೆದುಕೊಳ್ಳುವಂತೆ ಸಲಹೆ ನೀಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ದಾಕ್ಷಾಯಿಣಿ ಜಿ.ಕೆ ಹೇಳಿದರು.
ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಸನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿಂದು ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿಶ್ವ ಆರೋಗ್ಯ ಸಂಸ್ಥೆ ಕೈಗೊಂಡ ನಿರ್ಣಯದ ಪ್ರಕಾರ ವಿಶ್ವದಾದ್ಯಂತ 1988 ರಿಂದ ಏಡ್ಸ್ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇದರ ಉದ್ದೇಶ ಜಾಗತಿಕ ಮಟ್ಟದಲ್ಲಿ ಪ್ರತಿಯೊಬ್ಬರಿಗೂ ಏಡ್ಸ್ ಕುರಿತಾಗಿ ತಿಳುವಳಿಕೆ ನೀಡುವ ಉದ್ದೇಶದಿಂದ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಏಡ್ಸ್ ಕುರಿತು ಜನರು ಹೊಂದಿರುವಂತಹ ಮೂಢನಂಬಿಕೆಗಳು, ತಪ್ಪು ಭಾವನೆಗಳನ್ನು ಹೋಗಲಾಡಿಸುವುದಕ್ಕಾಗಿ ಸಂಘ-ಸಂಸ್ಥೆಗಳು ಸಾಕಷ್ಟು ಪ್ರಯತ್ನ ಮಾಡುತ್ತಿವೆ. ಏಡ್ಸ್ ರೋಗ ಬಂದಂತಹ ರೋಗಿಗಳನ್ನು ಅವರು ಸಂಧಿಸಿ ಅವರಿಗೆ ವೈದ್ಯಕೀಯ ತಪಾಸಣೆ ಪಡೆದುಕೊಳ್ಳಲು ಸೂಕ್ತ ಮಾರ್ಗದರ್ಶನವನ್ನು ನೀಡಿ ಆ ರೋಗದಿಂದ ಅವರನ್ನು ವಿಮುಕ್ತಗೊಳಿಸಲು ಶ್ರಮಿಸುತ್ತಿದ್ದಾರೆ ಇವರ ಈ ಕೆಲಸ ಶ್ಲಾಘನೀಯವಾಗಿದೆ ಎಂದರು.
ನಮ್ಮಿಂದ ಸಾಧ್ಯವಾದಷ್ಟು ಅವರಿಗೆ ಸಹಾಯ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರವು ಅನೇಕ ಯೋಜನೆಗಳನ್ನು ಕೂಡ ಜಾರಿಗೊಳಿಸಿದೆ ಇವುಗಳ ಬಗ್ಗೆ ಅವರಿಗೆ ಮಾಹಿತಿಯನ್ನು ನೀಡಬೇಕು. ಇದಕ್ಕೆ ಯುವಜನತೆಯ ಪಾತ್ರ ಮಹತ್ವದ್ದಾಗಿದೆ. ಯುವಜನರು ದೇಶವನ್ನು ಕಟ್ಟುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಾರೆ ಹಾಗಾಗಿ ಇಂತಹ ಕೃತ್ಯಗಳು ಆಗದಂತೆ ಯುವ ಜನತೆ ಎಚ್ಚರ ವಹಿಸಬೇಕು. ಜೊತೆಗೆ ತಮ್ಮ ಸುತ್ತಮುತ್ತಲಿನವರಿಗೂ ಈ ರೋಗದ ಕುರಿತು ಜಾಗೃತಿ ಮೂಡಿಸಬೇಕು. ಎಲ್ಲರೂ ಕೈಜೋಡಿಸಿದರೆ ಮಾತ್ರ ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa