
ಹುಬ್ಬಳ್ಳಿ, 01 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಮಕ್ಕಳ ಮನಸ್ಸಿನಲ್ಲಿ ಪರಿಸರದ ಬಗ್ಗೆ ಕಾಳಜಿ, ಪ್ರೀತಿ ಮೂಡಬೇಕಿದೆ. ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮದೇಯಾದ ಜವಾಬ್ದಾರಿಯನ್ನು ಹೊಂದಿರಬೇಕು. ಪರಿಸರದಲ್ಲಿನ ಪ್ರತಿಯೊಂದು ವಸ್ತುವನ್ನು ಪ್ರೀತಿಸುವ ಗುಣವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಓಡಿಸ್ಸಾ ರಾಜ್ಯದ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಕೃಷ್ಣ ದೀಕ‌್ಷಿತ ಹೇಳಿದರು.
ಹುಬ್ಬಳ್ಳಿ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಸಾರಿಗೆ ಇಲಾಖೆ ಮತ್ತು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಇವುಗಳ ಸಹಯೋಗದೊಂದಿಗೆ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಸಮಾರೋಪ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆಯು ಸಂಸ್ಕೃತ ಭಾಷೆಗಿಂತ ಹಿರಿಯದ್ದಾಗಿದೆ. ಸಂಸ್ಕೃತ ಭಾಷೆಗಿಂತ ಕನ್ನಡ ಭಾಷೆ ಪ್ರಬಲವಾದ ಭಾಷೆಯಾಗಿದೆ. ಇಂಗ್ಲಿಷ್ ಭಾಷೆಯ ಸಾಹಿತ್ಯ ಕೃತಿಗಳಿಗಿಂತ ಕನ್ನಡ ಭಾಷೆಯ ಸಾಹಿತ್ಯ ಕೃತಿಗಳನ್ನು ಓದಬೇಕು ಎಂದು ಅವರು ತಿಳಿಸಿದರು.
ಸಮಾಜ, ಪರಿಸರವನ್ನು ಮಲೀನಗೊಳಿಸದ ತಾಯಿ ಸಾಲು ಮರದ ತಿಮ್ಮಕ್ಕ. ಅವರ ಜೀವಿತಾವಧಿಯುದ್ದಕ್ಕೂ ಸಾಕಷ್ಟು ಸಸಿಗಳನ್ನು ನೆಟ್ಟು ಬೆಳಿಸಿ, ಪೋಷಿಸುವ ಕೈಂಕರ್ಯ ಮಾಡಿದವರು. ಪರಿಸರವನ್ನು ಉಳಿಸಿದ ಮಹಾತಾಯಿಯಾಗಿದ್ದಾರೆ. ಭೂಮಿಯ ಮೇಲಿನ ಜೀವಿಗಳಿಗೆ ಆಮ್ಲಜನಕ ಮುಖ್ಯವಾಗಿ ಬೇಕಾಗಿದೆ. ವಾಹನಗಳಿಂದ ಶಬ್ಧ ಮಾಲಿನ್ಯ, ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ಮಾಲಿನ್ಯ ಮುಕ್ತ ವಾತಾವರಣ ನಿರ್ಮಾಣ ಮಾಡುವತ್ತ ಹೆಜ್ಜೆಯಿಡಬೇಕು ಎಂದರು.
1969 ರಲ್ಲಿ ಚಂದ್ರಯಾನ ನಡೆಸಿದ ನೀಲ್ ಆರ್ಮ್‌ಸ್ಟ್ರಾಂಗ್ ಅವರಿಗೆ ನ್ಯೂಯಾರ್ಕ್ ನಗರವನ್ನು ಹೇಗೆ ಕಂಡು ಹಿಡಿದ್ದೀರಿ ? ಎಂದು ಪ್ರಶ್ನೆ ಕೇಳಿದಾಗ, ನ್ಯೂಯಾರ್ಕ್ ನಗರವು ದಟ್ಟ ಹೊಗೆಯನ್ನು ಹೊಂದಿತ್ತು ಹೀಗಾಗಿ ಕಂಡು ಹಿಡಿಯಲು ಸರಳವಾಯಿತು. ಇದು ವಾಯು ಮಾಲಿನ್ಯ ಹೆಚ್ಚಳವಾಗಿರುವುದಕ್ಕೆ ಸೂಕ್ತ ನಿದರ್ಶನವಾಗಿದೆ. ನಾವು ಕುಡಿಯುವ ನೀರು ಸಹ ಮಲೀನವಾಗಿರುತ್ತದೆ. ತಾಯಿಯ ಎದೆಹಾಲು ಕೂಡ ಮಲೀನವಾಗಿದೆ ಎಂಬ ಅಂಶ ಅಧ್ಯಯನದಿಂದ ತಿಳಿದು ಬಂದಿದೆ. ವಾಹನಗಳ ದಟ್ಟನೆಯಿಂದ ಶಾಲಾ ಮಕ್ಕಳಿಗೆ ಸಾಕಷ್ಟು ತೊಂದರೆಗಳು ಆಗುತ್ತಿವೆ. ಪರಿಸರ ಮಾಲಿನ್ಯದಿಂದ ಪ್ರಬಲ ಮತ್ತು ಸದೃಢ ಜನಾಂಗ ಕಟ್ಟಲು ಸಾಧ್ಯವಾಗುವುದಿಲ್ಲ. ಉತ್ತಮ ಪರಿಸರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಅವರು ತಿಳಿ ಹೇಳಿದರು.
ಯುರೋಪಿಯನ್ ದೇಶಗಳಲ್ಲಿನ ನದಿಗಳು ಶುಭ್ರವಾಗಿವೆ. ಆದರೆ ನಮ್ಮ ದೇಶದಲ್ಲಿನ ನದಿಗಳ ದಂಡೆಯ ಮೇಲೆ ನಡೆದಾಡಲು ಸಹ ಸಾಧ್ಯವಾಗದು. ಅಷ್ಟರಮಟ್ಟಿಗೆ ನದಿಗಳು ಮಲೀನವಾಗಿವೆ. ಮೈ, ಮನಸ್ಸುಗಳು ಸ್ವಚ್ಛವಾಗಿಡಬೇಕು. ಮನಸ್ಸುಗಳನ್ನು ಆಗಾಗ ಸ್ವಚ್ಛ ಮಾಡಬೇಕು. ಭಗವಂತನ ಸೃಷ್ಟಿಯಲ್ಲಿ ಅಪಚಾರ ಮಾಡದಂತೆ ಜೀವಿಸಬೇಕು ಎಂದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಾ. ಸಿ. ಬಸವರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 22 ವರ್ಷಗಳಿಂದ ಪರಿಸರ ಕಾನೂನು ವಿಷಯದ ಬಗ್ಗೆ ಬೋಧಿಸುತ್ತಿದ್ದೇನೆ. ವಿಶ್ವದೆಲ್ಲೆಡೆ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಪರಿಸರ ಮತ್ತು ಜೀವ ಸಂಕುಲ ಒಂದಕ್ಕೊಂದು ಬೆಸೆದುಕೊಂಡಿವೆ. ಉತ್ತಮ ಪರಿಸರ ದೊರೆಯದೆ ಇದ್ದರೆ ಪರಿಸರದಲ್ಲಿನ ಜೀವಿಗಳು ನಾಶವಾಗುತ್ತವೆ. ಮಾಲಿನ್ಯ ನಿಯಂತ್ರಣ ನಮ್ಮ ಏಕೈಕ ಕರ್ತವ್ಯವಾಗಿದೆ. ಪರಿಸರ ಮಾಲಿನ್ಯ ಮಾನವ ಜನಾಂಗಕ್ಕೆ ದೊಡ್ಡ ಅಪಾಯವಾಗಿದೆ. ಮಾಲಿನ್ಯ ರಹಿತ ಪರಿಸರ ಮನುಕುಲಕ್ಕೆ ಅವಶ್ಯಕವಾಗಿದೆ. ಪ್ರತಿ ಮನೆ ಮನೆಗಳಿಂದ ಪರಸರ ರಕ್ಷಣೆ ಕುರಿತು ಜಾಗೃತಿಯನ್ನು ಮೂಡಿಸಬೇಕಿದೆ. ವಾಹನ ಸವಾರರಿಗೆ ಪರಿಸರದ ಬಗ್ಗೆ ಅರಿವು ಮೂಡಿಸಬೇಕು. ವಾಹನಗಳಿಂದ ಹೆಚ್ಚು ಮಾಲಿನ್ಯವಾಗುತ್ತಿದೆ. ವಾಹನಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಿದೆ. ಹೊಸ ವಾಹನಗಳು ಮಾರುಕಟ್ಟೆಗೆ ಬರದಂತೆ ತಡೆದರೆ ಶೇ.30 ರಿಂದ 40 ರಷ್ಟು ವಾಯು ಮಾಲಿನ್ಯ ತಡೆಯಬಹುದು. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ಕೈಗಾರಿಕೆಗಳಿಂದ ಸಹ ಪರಿಸರ ಹೆಚ್ಚು ಮಲೀನವಾಗುತ್ತಿದೆ. ವಾಯು ಮಾಲಿನ್ಯ, ಶಬ್ಧ ಮಾಲಿನ್ಯ, ಜಲ ಮಾಲಿನ್ಯ ಸೇರಿದಂತೆ ಹಲವಾರು ಬಗೆಗಳಲ್ಲಿ ಪರಿಸರ ಮಲೀನಗೊಳ್ಳುತ್ತಿದೆ. ಪ್ರಸ್ತುತ ದಿನಮಾನಗಳಲ್ಲಿ ಪರಿಸರ ರಕ್ಷಣೆಗಿಂತ ನಗರಾಭಿವೃದ್ಧಿಯೇ ಮುಖ್ಯವಾಗಿದೆ. ಮನೆಗಳ ನಿರ್ಮಾಣಕ್ಕಾಗಿ ಅರಣ್ಯವನ್ನು ನಾಶಗೊಳಿಸುತ್ತಿದ್ದೇವೆ. ವಾಯು ಮಾಲಿನ್ಯ ಹಾಗೂ ಜಲ ಮಾಲಿನ್ಯ ತಡೆಗಟ್ಟುವುದು ಬಹಳ ಮುಖ್ಯವಾಗಿದೆ. ಮಕ್ಕಳಿಗೆ ಮಾಲಿನ್ಯ ನಿಯಂತ್ರಣ ಕುರಿತು ಪಠ್ಯದ ಮೂಲಕ ತಿಳಿಹೇಳಬೇಕಿದೆ. ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿದೆ. ಮನುಕುಲದ ಉಳಿವಿಗೆ ಎಲ್ಲರೂ ಮುಂದಾಗಬೇಕು ಎಂದು ಅವರು ಪ್ರತಿಪಾದಿಸಿದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾದ ವಿ.ಡಿ. ಕಾಮರಡ್ಡಿ ಮಾತನಾಡಿ, ಪರಿಸರ ಇದ್ದರೆ ನಾವು ಉಳಿಯಲು ಸಾಧ್ಯ. ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು. ಒಂದು ವಾಹನಕ್ಕೆ ಎರಡು ಗಿಡ ನೆಡಲು ಮುಂದಾಗಬೇಕು. ಆ ಗಿಡಗಳ ನಿರ್ವಹಣೆಯನ್ನು ಅರಣ್ಯ ಇಲಾಖೆಗೆ ನೀಡಬೇಕು. ಪ್ರತಿಯೊಬ್ಬರೂ ತಮ್ಮ ಹುಟ್ಟು ಹಬ್ಬದಂದು ಸಸಿ ನೆಡುವ ಕಾರ್ಯಕ್ಕೆ ಮುಂದಾಗಬೇಕು ಎಂದು ಅವರು ಆಶಿಸಿದರು.
ಅಪರ ಸಾರಿಗೆ ಆಯುಕ್ತರಾದ ಕೆ.ಟಿ.ಹಾಲಸ್ವಾಮಿ ಮಾತನಾಡಿ, ಸಾಮಾನ್ಯ ಜನರು ಸಹ ಕಾರು, ಬೈಕ್ ಹೊಂದಿದ್ದಾರೆ. ಬೇರೆ ದೇಶಗಳಲ್ಲಿ ಸೈಕಲ್ ಗಳನ್ನು ಜಾಸ್ತಿ ಬಳಕೆ ಮಾಡುತ್ತಿದ್ದಾರೆ. ಅಲ್ಲದೇ ಮಾಲಿನ್ಯ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ಅಲ್ಲಿನ ಜನರು ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುವರು. ದೆಹಲಿಯಲ್ಲಿ ಮಲೀನ ಗಾಳಿಯನ್ನು ಜನರು ಸೇವಿಸುತ್ತಾರೆ. ಮುಂದಿನ ದಿನಗಳಲ್ಲಿ ಆಕ್ಸಿಜನ್ ಸಿಲಿಂಡರ್ ಹೊತ್ತು ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು. ವಾಯು ಮಾಲಿನ್ಯ ನಿಯಂತ್ರಣ ಮಾಡಲು ವಾಹನ ಸವಾರರಿಗೆ ಸಸಿ ನೆಡಲು ತಿಳಿ ಹೇಳಲಾಗುವುದು. ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ನಿರ್ಮಿಸಿ ಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹೊಲ ಗದ್ದೆ, ಶಾಲಾ ಆವರಣದಲ್ಲಿ ಸಸಿಗಳನ್ನು ಬೆಳೆಸಲು ಮುಂದಾಗಬೇಕು. ಪರಿಸರ ಮಾಲಿನ್ಯದಿಂದಾಗಿ ಮಕ್ಕಳು ಕಣ್ಣು, ಶ್ವಾಸಕೋಶ ಸಂಬಂಧಿ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಪರಿಸರ ರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದು ತಿಳಿಸಿದರು.
ಜಂಟಿ ಸಾರಿಗೆ ಆಯುಕ್ತರಾದ ಸಿದ್ದಪ್ಪ ಕಲ್ಲೇರ ಮಾತನಾಡಿ, ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಮಾಡಲಾಗುವುದು. ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳವಾಗಿದೆ. ವಾಹನಗಳ ಚಲಾವಣೆಯಿಂದ ಜೀವ ಸಂಕುಲದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಗ್ಯಾರೇಜ್ ಗಳ ಮಾಲೀಕರಿಗೆ ವಾಯು ಮಾಲಿನ್ಯ ನಿಯಂತ್ರಣ ಕುರಿತು ಜಾಗೃತಿ ಮೂಡಿಸಲಾಗಿದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ
ಪೂಜಾ ವಾಲಿ (ಪ್ರಥಮ), ಶಿಲ್ಪಾ ಚಿಕ್ಕಬೆಂಡಿಗೇರಿ (ದ್ವಿತೀಯ), ಸವಿತಾ (ತೃತೀಯ) ಬಹುಮಾನ
ಪಡೆದುಕೊಂಡರು. ಚಿತ್ರಕಲೆ ಸ್ಪರ್ಧೆಯಲ್ಲಿ
ಶರಣ್ಯಾ ಜಿ., ರುಬಿನಾ ಹಾಗೂ ಲಕ‌್ಷ್ಮಿ ಕುಬಸದ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದರು.
ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ವಿಶ್ವವಿದ್ಯಾಲಯದ ಉಪನ್ಯಾಸಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa