
ಕುಪ್ವಾರಾ, 08 ನವೆಂಬರ್ (ಹಿ.ಸ.) :
ಆ್ಯಂಕರ್ : ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕೇರನ್ ಸೆಕ್ಟರ್‌ನಲ್ಲಿ ಗಡಿಯಾಚೆಯಿಂದ ನಡೆದ ಒಳನುಸುಳುವಿಕೆ ಯತ್ನವನ್ನು ಭದ್ರತಾ ಪಡೆಗಳು ಶನಿವಾರ ಯಶಸ್ವಿಯಾಗಿ ತಡೆದಿವೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರು ಹತ್ಯೆಯಾಗಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಚಿನಾರ್ ಕಾರ್ಪ್ಸ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ, “ಕುಪ್ವಾರಾ ಜಿಲ್ಲೆಯ ಕೇರನ್ ಸೆಕ್ಟರ್‌ನಲ್ಲಿ ನಡೆದ ಒಳನುಸುಳುವಿಕೆ ಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿದ್ದು, ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ” ಎಂದು ಪ್ರಕಟಿಸಿದೆ.
ಭಯೋತ್ಪಾದಕರು ಗಡಿಯಾಚೆಯಿಂದ ಒಳನುಸುಳಲು ಯತ್ನಿಸುತ್ತಿರುವ ಕುರಿತು ಗುಪ್ತಚರ ಸಂಸ್ಥೆಗಳು ನೀಡಿದ ನಿಖರ ಮಾಹಿತಿಯ ಮೇರೆಗೆ ಜಂಟಿ ಕಾರ್ಯಾಚರಣೆ ಆರಂಭಿಸಲಾಗಿತ್ತು. ಸೈನಿಕರು ಅನುಮಾನಾಸ್ಪದ ಚಲನವಲನಗಳನ್ನು ಗಮನಿಸಿದ ನಂತರ ಎಚ್ಚರಿಕೆಯ ಗುಂಡು ಹಾರಿಸಿದಾಗ, ಭಯೋತ್ಪಾದಕರು ಪ್ರತಿಯಾಗಿ ಗುಂಡು ಹಾರಿಸಿದ್ದರು. ಬಳಿಕ ನಡೆದ ತೀವ್ರ ಗುಂಡಿನ ದಾಳಿಯಲ್ಲಿ ಇಬ್ಬರು ಉಗ್ರರು ಹತ್ಯೆಯಾದರು.
ಭದ್ರತಾ ಪಡೆಗಳು ಪ್ರದೇಶವನ್ನು ಸಂಪೂರ್ಣವಾಗಿ ಸುತ್ತುವರೆದಿದ್ದು, ಉಳಿದ ಉಗ್ರರ ಹುಡುಕಾಟ ಮುಂದುವರಿದಿದೆ. ಗಡಿಯಲ್ಲಿ ಹೆಚ್ಚುವರಿ ಕಣ್ಗಾವಲು ಹಾಗೂ ಗಸ್ತು ಬಲಪಡಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa