
ಪಾಟ್ನಾ, 08 ನವೆಂಬರ್ (ಹಿ.ಸ.) :
ಆ್ಯಂಕರ್ : ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ನವೆಂಬರ್ 11ರಂದು ನಡೆಯಲಿದ್ದು, ಅದನ್ನು ಗಮನದಲ್ಲಿಟ್ಟುಕೊಂಡು ನವೆಂಬರ್ 9ರ ಬೆಳಗ್ಗೆಯಿಂದ ನವೆಂಬರ್ 11ರವರೆಗೆ ಭಾರತ–ನೇಪಾಳ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿ ಮುಚ್ಚುವ ಅವಧಿಯಲ್ಲಿ ಮಧುಬನಿ ಜಿಲ್ಲೆಯ ಜಯನಗರದಿಂದ ನೇಪಾಳದ ಜನಕ್‌ಪುರದವರೆಗೆ ಸಂಚರಿಸುವ ರೈಲು ಸೇವೆಗೂ ತಾತ್ಕಾಲಿಕ ಸ್ಥಗಿತ ಘೋಷಿಸಲಾಗಿದೆ. ಬಿಹಾರ ಮತ್ತು ನೇಪಾಳದ ನಡುವೆ ಸುಮಾರು 729 ಕಿಲೋಮೀಟರ್ ಉದ್ದದ ಗಡಿ ಹರಡಿದೆ. ಪಶ್ಚಿಮ ಚಂಪಾರಣ್, ಪೂರ್ವ ಚಂಪಾರಣ್, ಶಿವಹಾರ್, ಸೀತಾಮರ್ಹಿ, ಮಧುಬನಿ, ಸುಪೌಲ್, ಅರಾರಿಯಾ ಮತ್ತು ಕಿಶನ್‌ಗಂಜ್ ಜಿಲ್ಲೆಗಳು ಈ ಗಡಿ ವ್ಯಾಪ್ತಿಗೆ ಒಳಪಡುತ್ತವೆ.
“ಚುನಾವಣಾ ಅವಧಿಯಲ್ಲಿ ಅಕ್ರಮ ಚಟುವಟಿಕೆಗಳನ್ನೆಲ್ಲ ತಡೆಯಲು ಹಾಗೂ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಸ್ಥಳೀಯ ಪೊಲೀಸರು ಹಾಗೂ ಎಸ್‌ಎಸ್‌ಬಿ ಸಿಬ್ಬಂದಿ (ಸಶಸ್ತ್ರ ಸೀಮಾ ಬಲ್) ಜಂಟಿಯಾಗಿ ಗಸ್ತು ತಿರುಗುತ್ತಿದ್ದಾರೆ.” 90 ಕ್ಕೂ ಹೆಚ್ಚು ಚೆಕ್‌ಪೋಸ್ಟ್‌ಗಳಲ್ಲಿ ರಾತ್ರಿ ವೇಳೆ ಹೆಚ್ಚುವರಿ ಕಣ್ಗಾವಲು ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಅರಾರಿಯಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅಂಜನಿ ಕುಮಾರ್ ತಿಳಿಸಿದ್ದಾರೆ.
ಜಯನಗರದ ಎಸ್‌ಎಸ್‌ಬಿ 48ನೇ ಬೆಟಾಲಿಯನ್ ಚುನಾವಣೆಯನ್ನು ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದು, ಅದರಲ್ಲಿ “ಚುನಾವಣಾ ಅವಧಿಯಲ್ಲಿ ನೇಪಾಳಕ್ಕೆ ಹೋಗುವ ರೈಲುಗಳ ಕಾರ್ಯಾಚರಣೆಯನ್ನು ಭಾನುವಾರದಿಂದ ಮಂಗಳವಾರದವರೆಗೆ ನಿಲ್ಲಿಸಬೇಕು” ಎಂದು ಶಿಫಾರಸು ಮಾಡಲಾಗಿದೆ.
ಪೂರ್ವ ಮಧ್ಯ ರೈಲ್ವೆ (ಹಾಜಿಪುರ) ಕೂಡ ಮಧುಬನಿ ಜಿಲ್ಲಾಡಳಿತದ ಸಲಹೆಯಂತೆ ನೇಪಾಳದ ರೈಲ್ವೆ ಸೂಪರಿಂಟೆಂಡೆಂಟ್‌ಗೆ ಪತ್ರ ಕಳುಹಿಸಿದೆ. ಜಯನಗರ–ಜನಕ್‌ಪುರ–ಬಿಜಲ್ಪುರ ಮಾರ್ಗದ ಕೊನೆಯ ರೈಲು ಇಂದು ಸಂಚರಿಸಲಿದ್ದು, ಬಳಿಕ ಭಾನುವಾರದಿಂದ ಮಂಗಳವಾರದವರೆಗೆ ಸೇವೆ ಸ್ಥಗಿತಗೊಳ್ಳಲಿದೆ ಎಂದು ರೈಲ್ವೆ ಸೂಪರಿಂಟೆಂಡೆಂಟ್ ಎಸ್.ಎಲ್. ಮೀನಾ ತಿಳಿಸಿದ್ದಾರೆ.
ಚುನಾವಣಾ ಭದ್ರತೆ ದೃಷ್ಟಿಯಿಂದ ನವೆಂಬರ್ 8ರ ಬೆಳಗ್ಗೆಯಿಂದ ನವೆಂಬರ್ 11ರ ಸಂಜೆ 6 ಗಂಟೆಯವರೆಗೆ ಭಾರತ–ನೇಪಾಳ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಾಗುವುದು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa