




ಕೊಪ್ಪಳ, 07 ನವೆಂಬರ್ (ಹಿ.ಸ.) :
ಆ್ಯಂಕರ್ : ಕೊಪ್ಪಳ ಜಿಲ್ಲೆಯ ವಸತಿ ನಿಲಯಗಳಲ್ಲಿ ಇರುವ ಮಕ್ಕಳಿಗೆ ಸರ್ಕಾರಿಂದ ಸಿಗುವ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುವ ಮೂಲಕ ಅವರಿಗೆ ಯಾವುದೇ ಸಮಸ್ಯೆಗಳಾಗದಂತೆ ನೋಡಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ನ್ಯಾಯಾಂಗ ಸದಸ್ಯರಾದ ಸುರೇಶ ವಂಟಿಗೋಡಿ ಹೇಳಿದರು.
ಅವರು ಶುಕ್ರವಾರ ಕೊಪ್ಪಳ ನಗರದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಕೊಪ್ಪಳ ನಗರದ ಸರಕಾರಿ ಅತಿಥಿ ಗೃಹದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಕೊಪ್ಪಳ ನಗರದ ಎರಡು ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಎಲ್ಲಾ ಮಕ್ಕಳು ಸರಿಯಾದ ಸೌಲಭ್ಯ ಸಿಗುತ್ತಿದೆ ಎಂದು ಒಳ್ಳೆಯ ಅಭಿಪ್ರಾಯ ಹೇಳಿದ್ದಾರೆ. ಆದಾಗ್ಯೂ ಎಲ್ಲಾ ವಸತಿ ನಿಲಯಗಳಲ್ಲಿ ಸ್ವಚ್ಚತೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಒಳ್ಳೆಯ ಪೌಷ್ಟಿಕಾಂಶ ಆಹಾರವನ್ನು ಮಕ್ಕಳಿಗೆ ನೀಡಬೇಕು. ಬೆಳಿಗಿನ ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು. ಪೋಸ್ಟ್ ಮ್ಯಾಟ್ರಿಕ್ ವಸತಿ ನಿಲಯಗಳಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಡ್ರೆಸಚೈಜ್ ಕೊಠಡಿ ವ್ಯವಸ್ಥೆ ಮಾಡಬೇಕು. ತಹಶಿಲ್ದಾರರು ಆಗಾಗ ವಸತಿ ನಿಲಯಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಪರಿಶೀಲನೆ ನಡೆಸಬೇಕು ಎಂದರು.
ಹಾಸ್ಟೆಲಗಳಲ್ಲಿ ಸೆಕ್ಯುರಿಟಿ ಗಾರ್ಡಗಳು ಇರಬೇಕು. ವಸತಿ ನಿಲಯದ ರಸ್ತೆಗಳು ಸರಿಯಾಗಿ ಇರುವುದರ ಜೊತೆಗೆ ಬೀದಿ ದೀಪಗಳನ್ನು ಎಲ್ಲಾ ಕಡೆ ಹಾಕಬೇಕು. ಪ್ರತಿ ತಿಂಗಳು ವಸತಿ ನಿಲಯಗಳ ಮಕ್ಕಳ ಆರೋಗ್ಯ ತಪಾಸಣೆ ಮಾಡಬೇಕು. ಒಂದು ವಸತಿ ನಿಲಯಗಳಲ್ಲಿ ಹೆಚ್ಚಿನ ಮಕ್ಕಳಿದ್ದರೆ ಅವರಿಗೆ ಪ್ರತ್ಯೇಕ ಮತ್ತೊಂದು ವಸತಿ ನಿಲದ ವ್ಯವಸ್ಥೆ ಮಾಡಬೇಕು. ಆಗಾಗ ಅಧಿಕಾರಿಗಳು ಸರಪ್ರೈಸ್ ಭೇಟಿ ನೀಡಿ ವಸತಿ ನಿಲಯಗಳಲ್ಲಿ ಮಕ್ಕಳಿಗೆ ಸರಿಯಾಗಿ ಊಟ ನೀಡಲಾಗುತ್ತಿದೆಯೆ ಹಾಗೂ ಅವರಿಗೆ ಸರ್ಕಾರದ ಸೌಲಭ್ಯಗಳು ಉತ್ತಮ ರೀತಿಯಲ್ಲಿ ಸಿಗುತ್ತಿವೆಯೆ ಎಂದು ಪರಿಶೀಲನೆ ನಡೆಸಬೇಕು. ಮಕ್ಕಳಿಗೆ ಯಾವುದೇ ಕಾರಣಕ್ಕೆ ಕಡಿಮೆ ನ್ಯೂಟ್ರಿಷನ್ ಆಹಾರ ನೀಡುವ ಹಾಗಿಲ್ಲ. ಅವರಿಗೆ ತಮ್ಮ ಮೆನ್ಯೂನಿನ ಪ್ರಕಾರ ಆಹಾರ ನೀಡಬೇಕೆಂದರು.
ಪೊಲೀಸ್ ಠಾಣೆಗಳಿಗೆ ದೂರು ಕೊಡಲು ಬರುವ ಸಾರ್ವಜನಿಕರಿಗೆ ಜಿಲ್ಲೆಯ ಠಾಣೆಗಳಲ್ಲಿ ವೇಟಿಂಗ್ ಹಾಲ್‌ಗಳ ವ್ಯವಸ್ಥೆ ಮಾಡಬೇಕೆಂದು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ನಗರಸಭೆಯವರು ಸಾರ್ವಜನಿಕರ ಸ್ಥಳಗಳ ಸ್ವಚ್ಚತೆ ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯಗಳು ಜಿಲ್ಲೆಯಲ್ಲಿ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕೆಂದು ಹೇಳಿದರು.
ಜಿಲ್ಲೆಯಲ್ಲಿರುವ ಇಲಾಖೆಯ ವಸತಿ ನಿಲಯಗಳ ಅಧಿಕಾರಿ ಮತ್ತು ಸಿಬ್ಬಂದಿ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಅವರಿಗೆ ಯಾವುದೇ ರೀತಿಯ ಸಮಸ್ಯೆಗಳಾಗದಂತೆ ನೋಡಿಕೊಳ್ಳಬೇಕು. ಈ ಹಿಂದೆ ಜಿಲ್ಲೆಯಲ್ಲಿ ಸೋಮೊಟೊ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಪರಿಶೀಲನೆಗೆ ಬಂದಿದ್ದೇನೆ. ಈಗ ಅಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಮುಂದೇಯು ಸಮಸ್ಯೆಗಳಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಮೇಲಿದೆ ಎಂದು ಹೇಳಿದರು.
ಈ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕರಾದ ಅಜ್ಜಪ್ಪ ಸೊಗಲದ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ನಾಗಮಣಿ ಹೊಸಮನಿ. ಕೊಪ್ಪಳ ತಹಶಿಲ್ದಾರ ವಿಠಲ ಚೌಗಲಾ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ. ಪೊಲೀಸ್. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಿಗೆ ಸ್ವಾಗತ: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಿಗೆ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಕೊಪ್ಪಳ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರಾದ ಚಂದ್ರಶೇಖರ ಸಿ ಅವರು ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ಹೂ-ಹುಚ್ಚ ನೀಡಿ ಸ್ವಾಗತಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್