
ಕೊಪ್ಪಳ, 07 ನವೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ದಿ ನಿಗಮದಿಂದ 2025-26ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳಲ್ಲ್ಲಿ ಸಾಲ ಸೌಲಭ್ಯ ಪಡೆಯಲು ಕ್ರಿಶ್ಚಿಯನ್ ಸಮುದಾಯದವರಿಂದ ಅರ್ಜಿಯನ್ನು ಆಹ್ವಾನಿಸಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಅರಿವು ಸಾಲದ ಯೋಜನೆಯಡಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ 2025-26ನೇ ಸಾಲಿನಲ್ಲಿ ಕ್ರಿಶ್ಚಿಯನ್, ಸಮುದಾಯದ ವಿಧ್ಯಾರ್ಥಿಗಳಿಗೆ ಅರಿವು (FRESH CET / NEET) ಶೈಕ್ಷಣಿಕ ಸಾಲದ ಯೋಜನೆಯಡಿಯಲ್ಲಿ ರೂ. 50,000 ರಿಂದ 5 ಲಕ್ಷದವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಈ ಯೋಜನೆಯಡಿ ಕೆ.ಎಂ.ಡಿ.ಸಿ ವೆಬ್‍ಸೈಟ್‍ನಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಮತ್ತೆ KCCDC ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ.
ವಿದೇಶಿ ವಿದ್ಯಾಭ್ಯಾಸ ಸಾಲದ ಯೋಜನೆಯಡಿ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ರೂ.20 ಲಕ್ಷದವರೆಗೆ ಶಿಕ್ಷಣ ಸಾಲ ನೀಡಲಾಗುವುದು. ಸ್ವಾವಲಂಬಿ ಸಾರಥಿ ಸಹಾಯಧನ ಯೋಜನೆಯಡಿ ಟ್ಯಾಕ್ಸಿ, ಗೂಡ್ಸ್ ವಾಹನ, ಆಟೋರಿಕ್ಷಾ ಖರೀದಿಗೆ ರೂ.75,000 ರಿಂದ 3 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತದೆ.
ಶ್ರಮಶಕ್ತಿ ಸಾಲ ಮತ್ತು ಸಹಾಯಧನ ಯೋಜನೆಯಡಿ ಸಣ್ಣ ವ್ಯಾಪಾರ ಪ್ರಾರಂಭಿಸಲು ಅಥವಾ ಅಭಿವೃದ್ದಿಪಡಿಸಲು ರೂ.50.000/- ಸಾಲ (ಇದರಲ್ಲಿ ರೂ.25,000/- ಸಾಲ ರೂ.25,000/- ಸಹಾಯಧನ) ನೀಡಲಾಗುವುದು.
ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆಯಡಿ ಕ್ರಿಶ್ಚಿಯನ್ ಸಮುದಾಯದ ವಿಧವೆ, ವಿಚ್ಚೇದಿತ, ಅವಿವಾಹಿತ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲು ರೂ. 50,000/-ಇದರಲ್ಲಿ ರೂ.25,000/- ಸಾಲ ರೂ.25,000/- ಸಹಾಯಧನ) ಸಾಲ ನೀಡಲಾಗುವುದು.
ವೃತ್ತಿ ಪ್ರೋತ್ಸಾಹ ಯೋಜನೆಯಡಿ ಸಣ್ಣ ವ್ಯವಹಾರ, ಚಿಲ್ಲರೆ ವ್ಯಾಪಾರ, ವಾಹನಗಳ ದುರಸ್ತಿ ಸೇವೆ ಪ್ರಾರಂಭಿಸಲು ರೂ. 1 ಲಕ್ಷ ಸಾಲ ನೀಡಲಾಗುವುದು. ಇದರಲ್ಲಿ ರೂ.50,000/- ಸಾಲ ರೂ.50,000/- ಸಹಾಯಧನವಿರುತ್ತದೆ.
ಗಂಗಾ ಕಲ್ಯಾಣ ಯೋಜನೆಯಡಿ ಬೋರ್‍ವೆಲ್ ಕೊರೆಯುವುದು, ಪಂಪ್‍ಸೆಟ್ ಅಳವಡಿಸುವುದು ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕಾಗಿ ರೂ. 3 ಲಕ್ಷದಿಂದ 4 ಲಕ್ಷದವರೆಗೆ ಸಹಾಯಧನ ನೀಡಲಾಗುವುದು. ಸೌಲಭ್ಯ ಪಡೆಯಲು ಫಲಾನುಭವಿಯು ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು. ಅಂದರೆ 1 ಎಕರೆ 20 ಗುಂಟೆ ಯಿಂದ 5 ಎಕರೆ ವರೆಗೆ ಜಮೀನು ಹೊಂದಿರಬೇಕು.
ವ್ಯಾಪಾರ ಉದ್ದಿಮೆ, ನೇರ ಸಾಲ ಯೋಜನೆಯಡಿ ವ್ಯಾಪಾರ ಅಥವಾ ವಾಣಿಜ್ಯ ಚಟುವಟಿಕೆಗಳನ್ನು ನೇರವಾಗಿ ಪ್ರಾರಂಭಿಸಲು ರೂ.20 ಲಕ್ಷ ಸಾಲ ನೀಡಲಾಗುವುದು.
ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಸ್ವಉದ್ಯೋಗ ಕಲ್ಪಿಸಿಕೊಳ್ಳಲು ರೂ.2 ಲಕ್ಷದವರೆಗೆ ಶೇ.50 ಸಹಾಯಧನ ನೀಡಲಾಗುವುದು.
ಈ ಯೋಜನೆಗಳಿಗೆ ಆನ್‍ಲೈನ್ ಮೂಲಕ ವೆಬ್ ಸೈಟ್: http://kccdclonline.karnataka.gov.in ನಲ್ಲಿ ನವೆಂಬರ್ 30 ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಛೇರಿಯನ್ನು ಅಥವಾ ದೂ.ಸಂ: 08539-225008 ಗೆ ಸಂಪರ್ಕಿಸಬಹುದು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್