
ಕೊಪ್ಪಳ, 07 ನವೆಂಬರ್ (ಹಿ.ಸ.) :
ಆ್ಯಂಕರ್ : ಓಲಾ ಬ್ಯಾಟರಿ ಬೈಕ್ ದುರಸ್ತಿ ಮಾಡುವಲ್ಲಿ ಹಾಗೂ ದೂರುದಾರರ ಮನವಿಗೆ ಸ್ಪಂದಿಸದೇ ಸೇವಾ ನ್ಯೂನ್ಯತೆ ಎಸಗಿದ ಹಿನ್ನೆಲೆಯಲ್ಲಿ ದೂರುದಾರರಿಗೆ ಬಡ್ಡಿ ಸಹಿತ ಪರಿಹಾರ ಮೊತ್ತ ನೀಡುವಂತೆ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶಿಸಿದೆ.
ದೂರುದಾರರಾದ ಕಾರಟಗಿಯ ವಿಜಯಮಹಾಂತೇಶ ಕೆ. ತಂದೆ ಶರಣಪ್ಪ ಕೆ. ಅವರು ಓಲಾ ಕಂಪನಿಯ ಓಲಾ ಎಸ್-1 ಪ್ರೋ 3ನೇ ಜಿನ್ ಸ್ಕೂಟಿಯನ್ನು ದಿನಾಂಕ:04/03/2025 ರಂದು ಬುಕ್ ಮಾಡಿ ವಾಹನದ ಸಂಪೂರ್ಣ ಹಣ ರೂ.1,53,915/- ಗಳನ್ನು ದಿನಾಂಕ:05/03/2025 ರಂದು ಎದುರುದಾರರಿಗೆ ಪಾವತಿ ಮಾಡಿದ್ದರು. ಎದುರುದಾರ ಕಂಪನಿಯವರು ದಿನಾಂಕ:20/03/2025 ರಂದು ವಾಹನವನ್ನು ದೂರುದಾರರ ವಶಕ್ಕೆ ನೀಡಿದ್ದರು.
ದೂರುದಾರರು ವಾಹನವನ್ನು ಪಡೆದ ಎರಡೇ ದಿನದಲ್ಲಿ ತಾಂತ್ರಿಕ ದೋಷ ಉಂಟಾಗಿದ್ದ ದಿನಾಂಕ:22/03/2025 ರಂದು ಎದುರುದಾರ ಕಂಪನಿಯ ಕಾರಟಗಿ ಶೋರೂಮ್‌ಗೆ ವಾಹನವನ್ನು ಹಿಂದಿರುಗಿಸಿದ್ದರು. ವಾಹನದಲ್ಲಿ ಉಂಟಾದ ತಾಂತ್ರಿಕ ದೋಷವನ್ನು ಸರಿಪಡಿಸಿಕೊಡುವಂತೆ ಹಲವು ಬಾರಿ ಎದುರುದಾರರಲ್ಲಿ ವಿನಂತಿಸಿದರೂ ಸಹ ಎದುರುದಾರರು ವಾಹನದಲ್ಲಿ ಉಂಟಾದ ತಾಂತ್ರಿಕ ದೋಷವನ್ನು ನಿವಾರಿಸಿ, ವಾಹನವನ್ನು ಹಿಂದಿರುಗಿಸಿ ಕೊಡದೇ ಹಾಗೂ ದೂರುದಾರರ ಮನವಿಗೆ ಸ್ಪಂದಿಸದೇ ನಿರ್ಲಕ್ಷö್ಯ ತೋರಿ ಸೇವಾ ನ್ಯೂನ್ಯತೆಯನ್ನು ಎಸಗಿದ್ದರು.
ಇದರಿಂದ ಬೇಸತ್ತು ದೂರುದಾರರು ಪರಿಹಾರ ಕೋರಿ ಎದುರುದಾರರಾದ ಓಲಾ ಬ್ಯಾಟರಿ ಬೈಕ್ ಹೆಡ್ ಆಫೀಸ್ ಇವರ ಪ್ರತಿನಿಧಿ ಸಾವಿನಶೆಟ್ಟಿ, ಸೇಲ್ಸ್ ಮತ್ತು ಜೂವೆನಲ್ ಹೆಡ್ ಪ್ರೆಸ್ಟೀಜ್ ಆರ್.ಎಮ್.ಜಡ್. ಸ್ಟಾರ್ ಟೇಕ್ ನಂ.139, 2, ಹೊಸೂರು ರೋಡ್, ಇಂಡಸ್ಟಿಯಲ್ ಲೇಔಟ್-ಕೋರಮಂಗಲ ಮತ್ತು ಇನ್ನೂ ಇಬ್ಬರ ವಿರುದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕೊಪ್ಪಳದಲ್ಲಿ ದೂರನ್ನು ದಾಖಲಿಸಿದ್ದರು.
ದೂರನ್ನು ದಾಖಲಿಸಿಕೊಂಡ ಕೊಪ್ಪಳ ಜಿಲ್ಲಾ ಆಯೋಗದ ಅಧ್ಯಕ್ಷರಾದ ಜಿ.ಇ. ಸೌಭಾಗ್ಯಲಕ್ಷಿ ಹಾಗೂ ಸದಸ್ಯರಾದ ರಾಜು ಎನ್. ಮೇತ್ರಿ ರವರು ವಾದ ಪ್ರತಿವಾದಗಳನ್ನು ಆಲಿಸಿ, ಎದುರುದಾರರಿಂದ ಉಂಟಾದ ಸೇವಾ ನ್ಯೂನ್ಯತೆಗಾಗಿ ಹಾಗೂ ಅನುಚಿತ ವ್ಯಾಪಾರ ಪದ್ದತಿಗಾಗಿ ಎದುರುದಾರರು ದೂರುದಾರರಿಂದ ಪಡೆದ ವಾಹನ ಖರೀದಿ ಮೊತ್ತ ರೂ:1,53,915/-ಗಳನ್ನು ದಿನಾಂಕ:05/03/2025 ರಿಂದ ಪಾವತಿಯಾಗುವವರೆಗೆ ವಾರ್ಷಿಕ ಶೇ.6 ಬಡ್ಡಿ ಸಮೇತ ದೂರುದಾರರಿಗೆ ನೀಡುವಂತೆ ಹಾಗೂ ದೂರುದಾರರಿಗೆ ಉಂಟಾದ ಮಾನಸಿಕ ಯಾತನೆಗಾಗಿ ರೂ:10,000/- ಗಳನ್ನು ಹಾಗೂ ದೂರಿನ ಖರ್ಚು ರೂ:5,000/-ಗಳನ್ನು ಈ ಆದೇಶದ ದಿನಾಂಕದಿ0ದ 45 ದಿನಗಳ ಒಳಗಾಗಿ ಎದುರುದಾರರು ದೂರುದಾರರಿಗೆ ಪಾವತಿಸುವಂತೆ ಆದೇಶವನ್ನು ನೀಡಿದ್ದಾರೆ ಎಂದು ಆಯೋಗದ ಸಹಾಯಕ ರಿಜಿಸ್ಟಾçರ್ ಹಾಗೂ ಸಹಾಯಕ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್