
ಗದಗ, 30 ನವೆಂಬರ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ತಕ್ಷಣ ಆರಂಭಿಸುವಂತೆ ಒತ್ತಾಯಿಸಿ ಕಳೆದ 16 ದಿನಗಳಿಂದ ಅಹೋರಾತ್ರಿ ಹೋರಾಟ ನಡೆಸುತ್ತಿದ್ದ ರೈತರ ಆಕ್ರೋಶ ನಿನ್ನೆ ಮಧ್ಯರಾತ್ರಿಯಲ್ಲಿ ಉಚ್ಚಸ್ಥಾಯಿಗೆ ತಲುಪಿತು. ಸರ್ಕಾರದಿಂದ ಸ್ಪಷ್ಟ ಪ್ರತಿಕ್ರಿಯೆ ದೊರೆಯದ ಹಿನ್ನೆಲೆಯಲ್ಲಿ ರೈತರು ಪಾಲಾ–ಬಾದಾಮಿ ಹೆದ್ದಾರಿ ಸಂಪೂರ್ಣವಾಗಿ ಬಂದ್ ಮಾಡಿ ಪ್ರತಿಭಟನೆಗೆ ಮುಂದಾದರು.
ಸ್ವಾಮೀಜಿಗಳ ಮಾರ್ಗದರ್ಶನ ಹಾಗೂ ವಿವಿಧ ರೈತ ಒಕ್ಕೂಟಗಳ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಗೆ ನೂರಾರು ರೈತರು ಪಾಲ್ಗೊಂಡಿದ್ದು, ಮಧ್ಯರಾತ್ರಿ 12 ಗಂಟೆಯ ನಂತರ ರೈತರು ಹೆದ್ದಾರಿಯಲ್ಲೇ ಕೂತು ಭಜನೆ ಮಾಡುತ್ತಾ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
“ನಮ್ಮ ಬೆಳೆ ಬೆಳೆದಿದ್ದೇವೆ… ಆದರೆ ಸರ್ಕಾರ ಖರೀದಿಗೆ ಮುಂದಾಗಿಲ್ಲ. ನ್ಯಾಯ ಸಿಗುವವರೆಗೆ ಹೋರಾಟ ಮುಂದುವರೆಯುತ್ತದೆ” ಎಂದು ರೈತರು ಘೋಷಣೆ ಹಾಕಿದರು.
ಹೆದ್ದಾರಿ ಬಂದ್ ಮಾಹಿತಿ ಲಭುತ್ತಿದ್ದಂತೆ ಅಪರ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತ, ಡಿವೈಎಸ್ಪಿ ಸೇರಿದಂತೆ ಹಲವು ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿ ಬಂದರು. ಅಧಿಕಾರಿಗಳು ರೈತರೊಂದಿಗೆ ಸುದೀರ್ಘ ಮಾತುಕತೆ ನಡೆಸಿ, ಡಿಸೆಂಬರ್ 1ರಿಂದ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭವಾಗಲಿದೆ ಎಂದು ಭರವಸೆ ನೀಡುವ ಪ್ರಯತ್ನ ಮಾಡಿದರು.
ಆದರೆ ರೈತರು ಬಾಯಿ ಮಾತಿಗೆ ನಂಬಿಕೆ ಇಡದೇ, ಲಿಖಿತ ಭರವಸೆ ನೀಡುವಂತೆ ಪಟ್ಟು ಹಿಡಿದರು. “ನಾವು 16 ದಿನಗಳಿಂದ ಹೋರಾಟ ಮಾಡುತ್ತಿದ್ದೇವೆ. ಮತ್ತೆ ಮೋಸವಾಗಬಾರದು” ಎಂದು ರೈತ ನಾಯಕರು ಅಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿಸಿದರು.
ನಂತರ ಜಿಲ್ಲಾ ಆಡಳಿತದಿಂದ ಲಿಖಿತ ಪತ್ರ ತರುವುದು ಖಚಿತವಾದ ಬಳಿಕ, ರೈತರು ಹೆದ್ದಾರಿ ಬಂದ್ ತೆರವುಗೊಳಿಸಿದರು.
ಆದರೂ ಹೋರಾಟ ಸ್ಥಗಿತಗೊಂಡಿಲ್ಲ. “ಖರೀದಿ ಕೇಂದ್ರ ನಿಜವಾಗಿ ಆರಂಭವಾದ ದಿನವೇ ಹೋರಾಟ ನಿಲ್ಲುತ್ತೆ” ಎಂದು ರೈತರು ಹೇಳಿದರು.
ಮೆಕ್ಕೆಜೋಳದ ಬೆಲೆ ಕುಸಿತ ಹಾಗೂ ರೈತರು ಖರೀದಿ ಕೇಂದ್ರ ಆರಂಭವನ್ನು ಚಾತಕ ಪಕ್ಷಿಯಿಂದ ನೋಡುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP