
ಬೆಂಗಳೂರು, 30 ನವೆಂಬರ್ (ಹಿ.ಸ.) :
ಆ್ಯಂಕರ್ : ಸುಮಾರು 900 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಖ್ಯಾತ ಹಾಸ್ಯ ನಟರಾಗಿದ್ದ ಉಮೇಶ್ ರವರ ನಿಧನ ದು:ಖ ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದರು.
ಅವರು ಇಂದು ಚಲನಚಿತ್ರ ನಟ ಉಮೇಶ್ ರವರ ಪಾರ್ಥೀವ ಶರೀರವನ್ನು ದರ್ಶನ ಮಾಡಿ ಕುಟುಂಬಕ್ಕೆ ಸಾಂತ್ವನ ತಿಳಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಕನ್ನಡ ಚಿತ್ರರಂಗದ ಹಿರಿಯ ನಟ ಉಮೇಶ್ ರವರ ನಿಧನರಾಗಿದ್ದಾರೆ. ಮೈಸೂರಿನವರಾದ ಉಮೇಶ್ ರವರು ತಮ್ಮ ಕಿರಿಯ ವಯಸ್ಸಿನಲ್ಲಿಯೇ ರಂಗಭೂಮಿಯ ನಟರಾಗಿ, ನಂತರ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಸುಮಾರು 900 ಚಿತ್ರಗಳಲ್ಲಿ ಅಭಿನಯಿಸಿದ ಅನುಭವವಿರುವ ಉಮೇಶ್ ರವರು ಹಾಸ್ಯನಟರಾಗಿ ಖ್ಯಾತರಾಗಿದ್ದರು. 80 ವರ್ಷ ವಯಸ್ಸಿನ ಉಮೇಶ್ ರವರು ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದು, ಅವರ ಕೋರಿಕೆ ಮೇರೆಗೆ ಉಚಿತ ಕ್ಯಾನ್ಸರ್ ಚಿಕಿತ್ಸೆಗೆ ಸರ್ಕಾರದಿಂದ ನೆರವು ನೀಡಲಾಗಿತ್ತು ಎಂದರು.
ಉಮೇಶ್ ರವರ ಶ್ರೀಮತಿಯವರು ಅನಾರೋಗ್ಯದಿಂದ ಬಳಲುತ್ತಿದ್ದು, ಶೀಘ್ರ ಗುಣಮುಖರಾಗಲೆಂದು ಹಾರೈಸಿದ ಮುಖ್ಯಮಂತ್ರಿಗಳು, ಕನ್ನಡ ಚಿತ್ರರಂಗದ ಮೇರುನಟನನ್ನು ಕಳೆದುಕೊಂಡಿರುವುದು ಅತೀವ ದು:ಖ ತಂದಿದ್ದು, ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ಅವರ ಅಗಲಿಕೆಯ ದು:ಖವನ್ನು ಭರಿಸುವ ಶಕ್ತಿ ದೊರಕಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಯವರು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa