
ಹಾಸನ, 30 ನವೆಂಬರ್ (ಹಿ.ಸ.) :
ಆ್ಯಂಕರ್ : ಹಾಸನ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಕಿರಿಯ ಹಾಗೂ ಸಹಾಯಕ ಅಭಿಯಂತರರ ಹುದ್ದೆಗಳನ್ನು ತಾತ್ಕಾಲಿಕವಾಗಿ ಭರ್ತಿ ಮಾಡಲು ನಿವೃತ್ತ ಅಭಿಯಂತರರಿಂದ ಅರ್ಜಿಗಳನ್ನು ಜಿಲ್ಲಾಡಳಿತ ಆಹ್ವಾನಿಸಿದೆ. ಕರ್ನಾಟಕ ಲೋಕಸೇವಾ ಆಯೋಗದಿಂದ ನೇರ ನೇಮಕಾತಿ ಆಗುವವರೆಗೆ ಈ ತಾತ್ಕಾಲಿಕ ನಿಯುಕ್ತಿ ಜಾರಿಯಲ್ಲಿ ಇರಲಿದೆ.
ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 4ರೊಳಗಾಗಿ ಅಗತ್ಯ ದಾಖಲೆಗಳೊಂದಿಗೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಬೇಕು.
ಅರ್ಹತೆಗಳು:
ರಾಜ್ಯ ಸರ್ಕಾರ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಅಥವಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕಿರಿಯ/ಸಹಾಯಕ ಅಭಿಯಂತರರು ಮಾತ್ರ ಅರ್ಹರು. ಅರ್ಜಿದಾರರ ವಯಸ್ಸು 60 ರಿಂದ 65 ವರ್ಷಗಳೊಳಗಾಗಿ ಇರಬೇಕು. ಯಾವುದೇ ಇಲಾಖಾ ಅಥವಾ ನ್ಯಾಯಾಂಗ ವಿಚಾರಣೆ ಬಾಕಿ ಇಲ್ಲ ಎಂಬ ನೋಟರಿ ಪ್ರಮಾಣ ಪತ್ರ ಕಡ್ಡಾಯ.
ನೇಮಕಾತಿ ನಿಯಮಗಳು:
ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ 313 ರಿಂದ 316ರಂತೆ ಮಾಸಿಕ ವೇತನ ನಿಗದಿಪಡಿಸಲಾಗುತ್ತಿದ್ದು, ಇದನ್ನು ನಗರ ಸ್ಥಳೀಯ ಸಂಸ್ಥೆಗಳು ಸ್ವಂತ ನಿಧಿಯಿಂದ ಪಾವತಿಸಬೇಕಾಗುತ್ತದೆ. ಸರ್ಕಾರದಿಂದ ಯಾವುದೇ ಅನುದಾನ ಇರುವುದಿಲ್ಲ. ಈ ಪುನರ್ ನೇಮಕಾತಿ ಗರಿಷ್ಠ 12 ತಿಂಗಳು ಅಥವಾ ಹೊಸ ನೇಮಕಾತಿ ಆಗುವವರೆಗೂ ಮಾತ್ರ ಮಾನ್ಯ.
ಕರ್ತವ್ಯಕ್ಕೆ ಹಾಜರಾಗುವ ಮೊದಲು ವೈದ್ಯಕೀಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಕರ್ತವ್ಯ ನಿರ್ಲಕ್ಷ್ಯ, ದುರ್ವರ್ತನೆ ಅಥವಾ ಮೇಲಾಧಿಕಾರಿಗಳ ಸೂಚನೆ ಪಾಲಿಸದಿದ್ದರೆ ಯಾವುದೇ ಮುನ್ಸೂಚನೆ ನೀಡದೆ ಸೇವೆಯಿಂದ ವಜಾಗೊಳಿಸಲಾಗುವುದು.
ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಪೌರಾಡಳಿತ ನಿರ್ದೇಶನಾಲಯದ ಮಾರ್ಗಸೂಚಿಗಳು ಅನ್ವಯವಾಗಲಿದ್ದು, ಅರ್ಜಿ ಅಂಗೀಕಾರ/ತಿರಸ್ಕಾರ ಕುರಿತ ಅಂತಿಮ ಅಧಿಕಾರ ಜಿಲ್ಲಾಡಳಿತಕ್ಕಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa