
ಗದಗ, 29 ನವೆಂಬರ್ (ಹಿ.ಸ.) :
ಆ್ಯಂಕರ್ : ಗದಗ ನಗರದ ಬೆಟಗೇರಿ ನಾಡಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಹೊರಗುತ್ತಿಗೆ ನೌಕರ ಸುರೇಶ್ ಹಂಚಿನಾಳ ಲೋಕಾಯುಕ್ತ ಬಲೆಗೆ ಬಿದ್ದಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಡವಿಸೋಮಾಪುರ ಗ್ರಾಮದ ಎಲ್‌ಎಲ್‌ಬಿ ವಿದ್ಯಾರ್ಥಿ ನಾಗಾರ್ಜುನ ಕೋರಿ ಇವರಿಂದ ಬಂದ ದೂರು ಆಧರಿಸಿ ಲೋಕಾಯುಕ್ತ ತಂಡ ಬಲೆ ಬೀಸಿತ್ತು.
ವೆಬ್‌ಸೈಟ್‌ನಲ್ಲಿ ಮೋಜಿನಿ ಅರ್ಜಿ ಅಪ್‌ಲೋಡ್ ಮಾಡಲು 3 ಸಾವಿರ ರೂಪಾಯಿ ಲಂಚ ಬೇಡಿಕೆ ಇಟ್ಟಿದ್ದಾನೆ ಎಂದು ದೂರುದಾರರು ಲೋಕಾಯುಕ್ತಕ್ಕೆ ತಿಳಿಸಿದ್ದರು. ದೂರುದಾರರೊಂದಿಗೆ ಮಾತುಕತೆಯ ನಂತರ ಸುರೇಶ್ ತನ್ನ ಗೆಳೆಯನ ಫೋನ್‌ಪೇ ಖಾತೆಗೆ ಹಣ ವರ್ಗಾಯಿಸಿಕೊಳ್ಳಲು ಸೂಚಿಸಿದ್ದಾನೆ ಎನ್ನಲಾಗಿದೆ.
ಸೂಕ್ಷ್ಮ ನಿಗಾವಹಿಸಿದ ಲೋಕಾಯುಕ್ತ ಅಧಿಕಾರಿಗಳು ಯೋಜಿತ ರೀತಿಯಲ್ಲಿ ಟ್ರ್ಯಾಪ್ ನಡೆಸಿ ಸುರೇಶ್ ಹಂಚಿನಾಳನನ್ನು ರೆಡ್‌ಹ್ಯಾಂಡ್‌ನಲ್ಲಿ ಸಿಕ್ಕಿಬಿದ್ದರು. ಘಟನೆ ನಂತರ ನಾಡಕಚೇರಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಹೊರಗುತ್ತಿಗೆ ನೌಕರನ ಲಂಚ ಬೇಡಿಕೆಯನ್ನು ಸಿಬ್ಬಂದಿ ವಲಯದಲ್ಲೇ ಚರ್ಚೆಗೆ ಗ್ರಾಸವಾಗಿದೆ.
ಈ ಸಂಬಂಧ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / lalita MP