
ನವದೆಹಲಿ, 29 ನವೆಂಬರ್ (ಹಿ.ಸ.) :
ಆ್ಯಂಕರ್ : ಭಾರತೀಯ ನೌಕಾಪಡೆಗೆ ಸಮುದ್ರ ಭದ್ರತೆಯಲ್ಲಿ ಮತ್ತೊಂದು ಬಲಿಷ್ಠ ಸೇರ್ಪಡೆಯಾಗಿದ್ದು ಮಜಗಾನ್ ಡಾಕ್ ಶಿಪ್‌ಬಿಲ್ಡಿಂಗ್ ಲಿಮಿಟೆಡ್ ನಿರ್ಮಿಸಿರುವ ನೀಲಗಿರಿ ವರ್ಗದ ನಾಲ್ಕನೇ ಸುಧಾರಿತ ಸ್ಟೆಲ್ತ್ ಫ್ರಿಗೇಟ್ ‘ತಾರಗಿರಿ’ ಶನಿವಾರ ಮುಂಬೈನಲ್ಲಿನ ವಿಶೇಷ ಸಮಾರಂಭದಲ್ಲಿ ನೌಕಾಪಡೆಗೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು.
ಪ್ರಾಜೆಕ್ಟ್-17A ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಅತ್ಯಾಧುನಿಕ ಫ್ರಿಗೇಟ್‌ಗಳ ಸಾಲಿನಲ್ಲಿ ತಾರಗಿರಿ ಪ್ರಮುಖ ಮೈಲಿಗಲ್ಲಾಗಿ ಹೊರಹೊಮ್ಮಿದೆ.
ತಾರಗಿರಿ, ವಿನ್ಯಾಸ ಮತ್ತು ಹಡಗು ನಿರ್ಮಾಣದಲ್ಲಿ ಭಾರತದ ಸ್ವಾವಲಂಬನೆಯ ಸಾಮರ್ಥ್ಯ ಹೆಚ್ಚುತ್ತಿರುವುದನ್ನು ಸ್ಪಷ್ಟಪಡಿಸುವ ಹಡಗಾಗಿದೆ. 75% ದೇಶೀಕರಣದೊಂದಿಗೆ ನಿರ್ಮಿತವಾಗಿರುವ ಈ ಯುದ್ಧನೌಕೆ, 200 ಕ್ಕೂ ಹೆಚ್ಚು MSME ಘಟಕಗಳನ್ನು ಒಳಗೊಂಡಿದ್ದು, ಸಾವಿರಾರು ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ.
ಹೊಸ ‘ತಾರಗಿರಿ’ ಹಿಂದಿನ INS ತಾರಗಿರಿಯ ಮರುವಿನ್ಯಾಸವಾದದ್ದು ವಿಶಿಷ್ಟ. ಹಳೆಯ ತಾರಗಿರಿ 1980ರಿಂದ 2013ರವರೆಗೆ ದೇಶಕ್ಕಾಗಿ 33 ವರ್ಷಗಳ ಕಾಲ ಅಮೋಘ ಸೇವೆ ಸಲ್ಲಿಸಿತ್ತು.
ಕಳೆದ 11 ತಿಂಗಳಲ್ಲಿ ನೌಕಾಪಡೆಗೆ ತಲುಪುತ್ತಿರುವ ಇದು ನಾಲ್ಕನೇ ಯುದ್ಧನೌಕೆ. ಮೊದಲ ಹಡಗುಗಳ ನಿರ್ಮಾಣದಿಂದ ಪಡೆದ ಅನುಭವದ ಫಲವಾಗಿ ತಾರಗಿರಿಯ ನಿರ್ಮಾಣ ಅವಧಿ 93 ತಿಂಗಳಿಂದ 81 ತಿಂಗಳಿಗೆ ಇಳಿಕೆಗೊಂಡಿದೆ. ಪ್ರಾಜೆಕ್ಟ್ 17A ಯ ಉಳಿದ ಮೂರು ಹಡಗುಗಳನ್ನು 2026ರ ಆಗಸ್ಟ್ ಒಳಗೆ ನೌಕಾಪಡೆಗೆ ಹಸ್ತಾಂತರಿಸುವ ಗುರಿ ನಿಗದಿಯಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa