ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ನಾಲ್ಕು ಜನರಿಗೆ ಗೌರವ ಸನ್ಮಾನ
ವಿಜಯಪುರ, 29 ನವೆಂಬರ್ (ಹಿ.ಸ.) : ಆ್ಯಂಕರ್ : ವಿಜಯಪುರ ನಗರದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2025 ದಿನದಂದು ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ, ಕ್ರೀಡೆ, ಪ್ರವಾಸೋದ್ಯಮಕ್ಕೆ ಉತ್ತೇಜನ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ನಾಲ್ಕು ಜನರಿಗೆ ಗೌರವ ಸ
ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ನಾಲ್ಕು ಜನರಿಗೆ ಗೌರವ ಸನ್ಮಾನ


ವಿಜಯಪುರ, 29 ನವೆಂಬರ್ (ಹಿ.ಸ.) :

ಆ್ಯಂಕರ್ : ವಿಜಯಪುರ ನಗರದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2025 ದಿನದಂದು ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ, ಕ್ರೀಡೆ, ಪ್ರವಾಸೋದ್ಯಮಕ್ಕೆ ಉತ್ತೇಜನ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ನಾಲ್ಕು ಜನರಿಗೆ ಗೌರವ ಸನ್ಮಾನ ಮಾಡಲು ಕೋರ್ ಕಮಿಟಿ ನಿರ್ಧರಿಸಿದೆ.

ಕೆಂಗಲಗುತ್ತಿ ಶಿಕ್ಷಕ ಹಣಮಂತ ಕಾತರಕಿ, ವಿಜಯಪುರ ಎ.ಎಸ್.ಐ ನೌಕರ ಮೌಲಾಸಾಬ ಮೈನುದ್ದೀನಸಾಬ ಇಂಗಳೇಶ್ವರ, ನವಿಮುಂಬೈನ ಓಟಗಾರ ಶ್ರೇಯಸ ಯಶವಂತ ರಾವ ಹಾಗೂ ವಿಜಯಪುರ ನಗರದ ಹೆಡ್ ಕಾನಸ್ಟೇಬಲ್ ಭೀಮಾಶಂಕರ ಮಾಡಗ್ಯಾಳ ಅವರನ್ನು ಕಾರ್ಯಕ್ರಮದ ದಿನ ಗೌರವ ಸನ್ಮಾನ ನಡೆಯಲಿದೆ.

ಈ ನಾಲ್ಕೂ ಜನ ಸಾಧಕರು ಶಿಕ್ಷಣ, ಪ್ರವಾಸೋದ್ಯಮ, ಪರಿಸರ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಅವರದೇ ಆದ ಕೊಡುಗೆ ನೀಡಿದ್ದಾರೆ.

*1. ಹಣಮಂತ ಕಾತರಕಿ*

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೆಂಗಲಗುತ್ತಿ ಗ್ರಾಮದ ಸರಕಾರಿ ಶಾಲೆಯ ಮುಖ್ಯ ಶಿಕ್ಷಕರಾಗಿರುವ ಹಣಮಂತ ಕಾತರಕಿ ರಾಯಚೂರು ತಾಲೂಕಿನ ಗುಂಡೆರದೊಡ್ಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2008 ರಿಂದ 5 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಈ ಅವಧಿಯಲ್ಲಿ ಗ್ರಾಮದ ಹತ್ತಿರ ಇದ್ದ ಎರಡು ಎಕರೆ ಜಮೀನಿನಲ್ಲಿ 203 ಸಸಿಗಳನ್ನು ನೆಟ್ಟು, ಪೋಷಣೆ.ಮಾಡಿದ್ದಾರೆ. ಅಲ್ಲದೇ, ಈ ಸಸಿಗಳನ್ನು ಪೋಷಿಸಿ ಬೆಳೆಸಲು ಮಕ್ಕಳಿಗೆ ದತ್ತು ನೀಡುವ ಮೂಲಕ ಬಾಲ್ಯದಿಂದಲೇ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಲು ಸ್ಪೂರ್ತಿ ನೀಡಿದ್ದಾರೆ. ಕೆಂಗಲಗುತ್ತಿಯಲ್ಲಿ 1917ರಲ್ಲಿ ಪ್ರಾರಂಭವಾಗಿರುವ ಶತಮಾನದ ಇತಿಹಾಸ ಹೊಂದಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2013 ರಿಂದ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ, ಇಲ್ಲಿಯೂ ಈವರೆಗೆ 200 ಸಸಿಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಮಕ್ಕಳಿಗೆ ಶೈಕ್ಷಣಿಕ ಪಠ್ಯದೊಂದಿಗೆ ಪರಿಸರ ಪೂರಕ ವಾತಾವರಣ ಸೃಷ್ಠಿಸಲು ತರಬೇತಿಯನ್ನು ನೀಡುತ್ತಿದ್ದಾರೆ.

*2. ಮೌಲಾಸಾಬ ಮೈನುದ್ದೀನಸಾಬ ಇಂಗಳೇಶ್ವರ*

ಮೌಲಾಸಾಬ ಮೈನುದ್ದೀನಸಾಬ ಇಂಗಳೇಶ್ವರ 1977ರಿಂದ ವಿಜಯಪುರ ನಗರದ ಗೋಳಗುಮ್ಮಟ ಆವರಣದಲ್ಲಿರುವ ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆಯಲ್ಲಿ ಕಚೇರಿ ಸಹಾಯಕರಾಗಿ ಸೇವೆ ಪ್ರಾರಂಭಿಸಿದ್ದಾರೆ. ಎರಡು ವರ್ಷ ಗೋವಾ ಮತ್ತು ಎಂಟು ವರ್ಷ ಬದಾಮಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಸೇವಾವಧಿಯಲ್ಲಿ ಎಲ್ಲ ಅಧಿಕಾರಿಗಳಿಗೆ ನೆಚ್ಚಿನ ನೌಕರರಾಗಿ ಕಾರ್ಯ ನಿರ್ವಹಿಸಿರುವ ಅವರು 2012ರಲ್ಲಿ ನಿವೃತ್ತರಾದ ನಂತರವೂ ಸ್ವಯಂ ಪ್ರೇರಣೆಯಿಂದ ಸೇವೆಯನ್ನು ಮುಂದುವರೆಸಿದ್ದಾರೆ.

*3. ಶ್ರೇಯಸ ಯಶವಂತ ರಾವ*

ಶ್ರೇಯಸ ಯಶವಂತ ರಾವ ಅವರು ನವಿ ಮುಂಬೈನವರಾಗಿದ್ದು, ವೃತ್ತಿಪರ ಅಥ್ಲೀಟ್ ಮತ್ತು ತರಬೇತುದಾರರಾಗಿದ್ದಾರೆ. ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಆಗಿ ಕ್ರೀಡಾ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ಮೂರು ವರ್ಷ ಕ್ರಾಸ್ಫಿಟ್ ಆಗಿ ಸ್ಪರ್ಧಿಸಿದದ್ದರು. 2022 ರಿಂದ ಹೈರಾಕ್ಸ್ ಕ್ರೀಡೆಯಲ್ಲಿದ್ದಾರೆ. ಬಿ. ಎಲ್. ಡಿ. ಇ ಸಂಸ್ಥೆಯ ಹಳೆಯ ವಿದ್ಯಾರ್ಥಿಯೂ ಆಗಿರುವ ಇವರು 2015 ರಲ್ಲಿ ಎಂ.ಬಿ.ಎ ಪದವಿ ಪಡೆದಿದ್ದಾರೆ. 400ಮೀ. ರಾಷ್ಟ್ರೀಯ ಪದಕ, 2025-26 ನೇ ವರ್ಷದಲ್ಲಿ ಹೈರಾಕ್ಸ್ ವಿಶ್ವ ಚಾಂಪಿಯನಶಿಪ್ ನಲ್ಲಿ ಅರ್ಹತೆ, ಗೋವಾದಲ್ಲಿ ನಡೆದ ಐರಾನಮ್ಯಾನ್ ಫಿನಿಶರ್ ಆಗಿ 70.3 ಕಿ. ಮೀ. ಓಡಿರುವುದು ಇವರ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ.

*4. ಭೀಮಾಶಂಕರ ಮಾಡಗ್ಯಾಳ*

ಇಂಡಿ ತಾಲೂಕಿನ ಹಳಗುಣಕಿ ಗ್ರಾಮದ ಭೀಮಾಶಂಕರ ಮಾಡಗ್ಯಾಳ ಅವರು 2008 ರಲ್ಲಿ ವಿಜಯಪುರದಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಸೇವೆ ಆರಂಭಿಸಿದರು. ಪೊಲೀಸ್ ವಸತಿ ಗೃಹದಲ್ಲಿ ನೆಲೆಸಿರುವ ಇವರು ವಸತಿ ಗೃಹದಲ್ಲಿ 500 ಸಸಿಗಳನ್ನು ನೆಟ್ಟಿದ್ದಾರೆ ಮತ್ತು ತೊರವಿ ಪೊಲೀಸ್ ವಸತಿ ಗೃಹದಲ್ಲಿ 1200 ಸಸಿಗಳನ್ನು ನೆಟ್ಟಿದ್ದಾರೆ. ರೈತ ಕುಟುಂಬದ ಹಿನ್ನೆಲೆ ಹೊಂದಿರುವ ಇವರಿಗೆ ಸಸಿಗಳನ್ನು ನೆಡುವುದೆಂದರೆ ಅಚ್ಚುಮೆಚ್ಚು. ಯಾವುದೇ ಸಭೆ ಸಮಾರಂಭಗಳಲ್ಲಿ ಸಸಿಗಳನ್ನೇ ಉಡುಗೊರೆಯಾಗಿ ನೀಡುತ್ತ ಬಂದಿದ್ದಾರೆ. ಕಾರ್ಯಕ್ರಮಗಳಲ್ಲಿ ಉಡುಗೊರೆ ನೀಡಿದರೆ ಸ್ವಲ್ಪ ದಿನಗಳಲ್ಲಿ ಮರೆತುಬಿಡುತ್ತಾರೆ. ಅದೇ ಸಸಿ ಕೊಟ್ಟಾಗ ಅದನ್ನು ಪಾಲನೆ- ಪೋಷಣೆ ಮಾಡಿ ಮರವಾಗುವವರೆಗೆ ನೆನಪು ಸದಾ ಇರುತ್ತದೆ ಎಂಬುದು ಇವರ ನಂಬಿಕೆಯಾಗಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande