
ಹಾಸನ, 29 ನವೆಂಬರ್ (ಹಿ.ಸ.) :
ಆ್ಯಂಕರ್ : ಹಾಸನ ಭೌಗೋಳಿಕವಾಗಿ ತಟಸ್ಥ ಪ್ರದೇಶವಾಗಿರುವುದಕ್ಕೆ ಎಂಸಿಎಫ್ ಕೂಡ ಇದೇ ಜಿಲ್ಲೆಯಲ್ಲಿ ಸ್ಥಾಪನೆಯಾಗಿದೆ ಎಂದು ಯು.ಆರ್.ಎಸ್.ಸಿ ಉಪನಿರ್ದೇಶಕರು ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಿಜ್ಞಾನಿ ಡಾ. ಎಸ್. ವೆಂಕಟೇಶ್ವರ ಶರ್ಮಾಜಿ ಅವರು ತಿಳಿಸಿದ್ದಾರೆ.
ಮೊಸಳೆಹೊಸಳ್ಳಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ಸಂಘದ ವತಿಯಿಂದ 2025ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಚಂದ್ರನಲ್ಲಿರುವ ನೀರಿನ ಸುಳಿವು ಮೊದಲು ಪತ್ತೆಹಚ್ಚಿದವರಲ್ಲಿ ಭಾರತೀಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಬಾಹ್ಯಕಾಶ ಸಂಶೋಧನೆಯಲ್ಲಿ ಕನ್ನಡಿಗ ವಿಜ್ಞಾನಿಗಳಾದ ಯು.ಆರ್. ರಾವ್ ಮುಂತಾದವರ ಕೊಡುಗೆ ಅಪಾರ ಎಂದು ಹೇಳಿದರಲ್ಲದೆ, ಕನ್ನಡ ನಾಡಿಗೆ ಕೀರ್ತಿ ತರುವ ಜವಾಬ್ದಾರಿ ವಿದ್ಯಾರ್ಥಿಗಳದ್ದಾಗಿದೆ ಎಂದರು.
ಪ್ರಾಂಶುಪಾಲರಾದ ಡಾ. ಟಿ. ರಂಗಸ್ವಾಮಿ ಅವರು ಮಾತನಾಡಿ, ನಮ್ಮ ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಪ್ರತಿವರ್ಷವೂ ಅದ್ದೂರಿಯಾಗಿ ಆಚರಿಸುವುದು ಹೆಮ್ಮೆಯ ವಿಷಯ. ಕನ್ನಡ ಸಂಘವು ನಡೆಸುವ ಪ್ರತಿಯೊಂದು ಕಾರ್ಯಕ್ರಮವೂ ವಿದ್ಯಾರ್ಥಿಗಳಲ್ಲಿ ಕನ್ನಡ ಪ್ರೀತಿಯನ್ನು ಉತ್ತೇಜಿಸುತ್ತದೆ ಎಂದು ಹೇಳಿದರು.
ಹಾಸನದ ಹಲವು ಕವಿಗಳು, ಸಾಹಿತ್ಯಕಾರರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಸ್ಮರಿಸಿ, ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಂಘದ ಸಂಯೋಜಕರಾದ ಡಾ. ಟಿ.ಎಸ್. ಮಹೇಶ್, ಡಾ. ರಘು ಎಂ.ಇ, ಕನ್ನಡ ಸಂಘದ ಪದಾಧಿಕಾರಿಗಳು, ಸದಸ್ಯರು, ಅಧ್ಯಾಪಕರು, ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa