
ಬೆಂಗಳೂರು, 28 ನವೆಂಬರ್ (ಹಿ.ಸ.) :
ಆ್ಯಂಕರ್ : ಅಂಗನವಾಡಿ ಕಾರ್ಯಕರ್ತೆಯರು ಸಮಾಜದ ಪೋಷಕರು, ಎರಡನೇ ತಾಯಿಯಾಗಿ ಜವಾಬ್ದಾರಿ ಹೊತ್ತು ಮಕ್ಕಳನ್ನು ಸಲಹಿ ದೇಶದ ಭವಿಷ್ಯ ರೂಪಿಸುವವರು. ಅಕ್ಷರಭ್ಯಾಸ ಮಾಡಿಸುವ ಸರಸ್ವತಿಯ ಸನ್ನಿಧಿ ಅಂಗನವಾಡಿ” ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು ಹಾಗೂ ಅಂಗನವಾಡಿ ಕೇಂದ್ರಗಳ ಸ್ಥಾಪನೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು. ಅಂಗನವಾಡಿ ಕಾರ್ಯಕರ್ತೆಯರು ನಿಮ್ಮ ಸ್ವಂತ ಮಕ್ಕಳಿಗೂ ಸಮಯ ನೀಡದೆ, ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ತ್ಯಾಗಮೂರ್ತಿಗಳು ನೀವು” ಎಂದರು.
“ಜನನ ನೀಡುವವಳು ತಾಯಿ, ಜೋಪಾನ ಮಾಡುವವಳು ಅಕ್ಕ, ಅಕ್ಷರ ಕಲಿಸಿದಾಕೆ ಶಿಕ್ಷಕಿ, ಜೊತೆಯಾಗಿ ನಿಲ್ಲುವವಳು ಹೆಂಡತಿ, ಮುಪ್ಪಿನಲ್ಲಿ ಆರೈಕೆ ಮಾಡುವವಳು ಮಗಳು, ಸತ್ತಾಗ ಜಾಗ ಕೊಡುವವಳು ಭೂಮಿ ತಾಯಿ. ಮನೆಯನ್ನು ಬೆಳಗುವವಳು ಹೆಣ್ಣು. ನೀವೆ ಕುಟುಂಬ ಹಾಗೂ ಸಮಾಜದ ಶಕ್ತಿ” ಎಂದು ಶ್ಲಾಘಿಸಿದರು.
ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಆಶಾ ಯೋಜನೆ, ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಸ್ತ್ರೀ ಶಕ್ತಿ ಸಂಘ ಯೋಜನೆ ತರಲಾಯಿತು. ನಾನು ಸಹಕಾರ ಸಚಿವನಾಗಿದ್ದಾಗ ಬೀದರ್ ಗೆ ತೆರಳಿದ್ದ ವೇಳೆ ಮಹಿಳಾ ಸಂಘಟನೆ ಕೆಲಸಗಳನ್ನು ಗಮನಿಸಿ ಇದಕ್ಕೆ ಒಂದು ಸ್ವರೂಪ ನೀಡಬೇಕು ಎಂದು ಎಸ್.ಎಂ.ಕೃಷ್ಣ ಅವರ ಬಳಿ ಚರ್ಚೆ ನಡೆಸಿದೆ. ತದ ನಂತರ ಕ್ಯಾಬಿನೆಟ್ ಮುಂದೆ ಚರ್ಚಿಸಿ ಸಚಿವರಾಗಿದ್ದ ಮೋಟಮ್ಮ ಅವರಿಗೆ ಇದರ ಜವಾಬ್ದಾರಿ ನೀಡಲಾಯಿತು” ಎಂದರು.
“ಇಂದು ಸ್ತ್ರೀ ಶಕ್ತಿ ಸಂಘಗಳು ಸಮಾಜದ ಶಕ್ತಿಗಳಾಗಿ ಬೆಳೆದಿವೆ. ಇದರಿಂದ ಆರ್ಥಿಕವಾದ ಶಕ್ತಿ ಲಭಿಸಿದೆ. ತಮ್ಮ ಕುಟುಂಬಗಳನ್ನು ಸಲಹುತ್ತಿದ್ದಾರೆ. ಇಂತಹ ಶಕ್ತಿಯನ್ನು ಕಾಂಗ್ರೆಸ್ ಮಹಿಳೆಯರಿಗೆ ನೀಡಿದೆ. ಇಂತಹ ಯಶಸ್ವಿ ಕಾರ್ಯಕ್ರಮ ಇಡೀ ದೇಶದಲ್ಲಿ ಯಾರು ಮಾಡಿಲ್ಲ” ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa