


ಹೊಸಪೇಟೆ, 28 ನವೆಂಬರ್ (ಹಿ.ಸ.) :
ಆ್ಯಂಕರ್ : ಪೊಲೀಸ್ ವೃತ್ತಿಯಲ್ಲಿ ಮಾನಸಿಕ, ಬೌದ್ಧಿಕ ಆರೋಗ್ಯದ ಜತೆಗೆ ದೈಹಿಕ ಸದೃಢತೆ ಅತ್ಯಗತ್ಯ. ಒತ್ತಡ ನಿರ್ವಹಣೆಗೆ ಕ್ರೀಡೆಗಳು ತುಂಬಾ ಸಹಕಾರಿಯಾಗಲಿವೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ಹೇಳಿದ್ದಾರೆ.
ನಗರದ ಡಿಎಆರ್ ಪರೇಡ್ ಮೈದಾನದ ಟಿಎಸ್‍ಪಿ ಆವರಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಶುಕ್ರವಾರ ಮಾತನಾಡಿದರು.
ತುರ್ತುಸೇವೆ ವಿಭಾಗದಲ್ಲಿ ಪೋಲಿಸ್ ಇಲಾಖೆ ಮಹತ್ತರ ಕರ್ತವ್ಯಗಳನ್ನು ನಿರ್ವಹಿಸುತ್ತದೆ. ಪೊಲೀಸರು ಕರ್ತವ್ಯ ವಿಚಾರದಲ್ಲಿ ಮಳೆ, ಚಳಿ, ಬಿಸಿಲು ಎನ್ನದೇ ಸದಾ ಸನ್ನದ್ಧರಾಗಿ ಕರ್ತವ್ಯನಿರತರಾಗಿರುತ್ತಾರೆ. ಪೊಲೀಸರು ಸಮಾಜದ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇಲಾಖೆಗಳಲ್ಲಿನ ನೌಕರರ ಆರೋಗ್ಯದ ಹಿತದೃಷ್ಟಿಯಿಂದ ವಾರ್ಷಿಕ ಕ್ರೀಡಾಕೂಟಗಳನ್ನು ಆಯೋಜಿಸಿ ನೌಕರರಲ್ಲಿ ಉತ್ಸಾಹ ಮೂಡಿಸುತ್ತಿರುವುದು ಶ್ಲಾಘನೀಯ. ಕ್ರೀಡೆಗಳಿಂದ ಸಮತೋಲನ ಆರೋಗ್ಯ ವೃದ್ಧಿಯಾಗಲಿದೆ. ನಿತ್ಯ ಚೈತನ್ಯಭರಿತರಾಗಲು ಇಂತಹ ಕ್ರೀಡೆಗಳು ಸಹಕಾರಿಯಾಗಲಿವೆ. ಕ್ರೀಡಾಳುಗಳಲ್ಲಿ ಸೋಲು, ಗೆಲುವುಗಿಂತ ಭಾಗವಹಿಸುವಿಕೆ ಮುಖ್ಯವಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮೋಹಮ್ಮದ್ ಅಕ್ರಮ್ ಅಲಿ μÁ ಮಾತನಾಡಿ, ಕ್ರೀಡೆಯಲ್ಲಿ ಶಿಸ್ತು, ಉತ್ಸಾಹ ಮತ್ತು ಪ್ರಾಮಾಣಿಕತೆ ಮುಖ್ಯವಾಗಿದೆ. ಪೊಲೀಸ್ ಇಲಾಖೆಯ ಪ್ರತಿಯೊಬ್ಬರು ಈ ಕ್ರೀಡಾಕೂಟದಲ್ಲಿ ಖುಷಿಯಿಂದ ಭಾಗವಹಿಸಬೇಕು. ದಿನ ನಿತ್ಯ ಎದುರಾಗುವ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಕ್ರೀಡಾಕೂಟದಲ್ಲಿ ಸ್ಪರ್ಧಿಸಿ ಮಾನಸಿಕ ನಿರಾಳತೆಯನ್ನು ಪಡೆಯಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಸ್.ಜಾಹ್ನವಿ ಮಾತನಾಡಿ, ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವು ಮೂರು ದಿನಗಳ ಕಾಲ ನಡೆಯಲಿದೆ. ಇದರಲ್ಲಿ ಭಾಗವಹಿಸಿದ ಮೂರು ಉಪವಿಭಾಗಗಳ ಐದು ತಂಡಗಳು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿ ಕ್ರೀಡಾಮನೋಭಾವದಿಂದ ಆಟಗಳಲ್ಲಿ ಭಾಗವಹಿಸಬೇಕು ಎಂದರು.
ಇದಕ್ಕೂ ಮುನ್ನ ಆಕರ್ಷಕ ಪಥಸಂಚಲನ ನಡೆಸಲಾಯಿತು. ಈ ವೇಳೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಮಂಜುನಾಥ ಸೇರಿದಂತೆ ನಿವೃತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್