
ಉಡುಪಿ, 28 ನವೆಂಬರ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರ ಇಂದು ನಡೆಯಲಿರುವ ಉಡುಪಿ ಭೇಟಿಯ ಹಿನ್ನೆಲೆಯಲ್ಲಿ ನಗರವೆಲ್ಲ ಕೇಸರಿಮಯ ವಾತಾವರಣ ಪಡೆದುಕೊಂಡಿದೆ. ರಸ್ತೆಬದಿಗಳು, ಪ್ರಮುಖ ವೃತ್ತಗಳು, ಮಠದ ಸುತ್ತಮುತ್ತ ಕೇಸರಿ ಬಂಟಿಂಗ್ಸ್ ಮತ್ತು ಪತಾಕೆಗಳು ಅಲಂಕರಿಸಲ್ಪಟ್ಟಿದ್ದು, ನಗರದಾದ್ಯಂತ ಸ್ವಾಗತ ಸಿದ್ಧತೆಗಳು ಪೂರ್ಣಗೊಂಡಿವೆ.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ಮಾಹಿತಿ ಪ್ರಕಾರ, ನಿಗದಿತ ಸಮಯಕ್ಕಿಂತ 40 ನಿಮಿಷಗಳ ಮೊದಲೇ ಪ್ರಧಾನಿಗಳು ಕೃಷ್ಣನಗರಿಗೆ ಆಗಮಿಸಲಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಉಡುಪಿಯಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಲಿದ್ದಾರೆ.
ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಬೆಳಗ್ಗೆ 8 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಶ್ರೀ ಕೃಷ್ಣ ಮಠದಲ್ಲಿ ಭಕ್ತರಿಗೆ ದರ್ಶನ ನಿರ್ಬಂಧಿಸಲಾಗಿದೆ. ರಥಬೀದಿ, ಅಷ್ಟಮಠ ಮತ್ತು ಮಠದ ಸುತ್ತಮುತ್ತ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಸಂಜೆಯ ಬಳಿಕ ದರ್ಶನಕ್ಕೆ ಅವಕಾಶ ಇರಲಿದೆ.
ಪ್ರಧಾನಿ ಮೋದಿ ರಥಬೀದಿ ಮಾರ್ಗವಾಗಿ ಮಠ ಪ್ರವೇಶಿಸಿ, ಮೊದಲು ಕನಕನ ಕಿಂಡಿ ಮೂಲಕ ಶ್ರೀ ಕೃಷ್ಣನ ದರ್ಶನ ಮಾಡಲಿದ್ದಾರೆ. ಸುವರ್ಣ ಕನಕನ ಕಿಂಡಿ ಉದ್ಘಾಟನೆ, ಕನಕದಾಸರ ಗುಡಿ ದರ್ಶನ, ಮಧ್ವ ಸರೋವರದಲ್ಲಿ ತೀರ್ಥ ಪ್ರೋಕ್ಷಣೆ, ಚಿನ್ನದ ತೀರ್ಥ ಮಂಟಪ ಉದ್ಘಾಟನೆ ಹಾಗೂ ಅಷ್ಟಮಠಾಧೀಶರ ಭೇಟಿ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಿಗದಿಯಾಗಿವೆ. ಬಳಿಕ ಅವರು ಗೀತಾ ಮಂದಿರಕ್ಕೂ ಭೇಟಿ ನೀಡಲಿದ್ದಾರೆ.
ಭೇಟಿ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಠಿಣ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರ ನಿರ್ದೇಶನದಂತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಸೆಕ್ಷನ್ 163 ಪ್ರಕಾರ ಹೆಲಿಪ್ಯಾಡ್, ಶ್ರೀ ಕೃಷ್ಣ ಮಠ ವಠಾರ ಮತ್ತು ಪ್ರವಾಸಿ ಮಂದಿರದ ಸುತ್ತ ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಆದೇಶಿಸಲಾಗಿದೆ.
ಹೆಲಿಪ್ಯಾಡ್‌ನಿಂದ ಮಠದವರೆಗೆ ರಸ್ತೆಗಳಲ್ಲಿ ಬಾಂಬ್ ಸ್ಕ್ವಾಡ್ ಮತ್ತು ಶ್ವಾನ ದಳ ತಪಾಸಣೆ ನಡೆಸುತ್ತಿದ್ದು, ಉಡುಪಿ ಕರಾವಳಿ, ಬನ್ನಂಜೆ ಬಸ್ ನಿಲ್ದಾಣ ಮತ್ತು ಪಾರ್ಕಿಂಗ್ ಏರಿಯಾದಲ್ಲಿ ವಿಶೇಷ ಕಣ್ಗಾವಲು ಏರ್ಪಡಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa