
ಉಡುಪಿ, 28 ನವೆಂಬರ್ (ಹಿ.ಸ.) :
ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಉಡುಪಿಗೆ ಭೇಟಿ ನೀಡಲಿದ್ದಾರೆ.
ಉಡುಪಿಯಲ್ಲಿರುವ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲಿರುವ ಅವರು, ವಿದ್ಯಾರ್ಥಿಗಳು, ಸಾಧು-ಸಂತರು, ವಿದ್ವಾಂಸರು ಮತ್ತು ನಾಗರಿಕರು ಸೇರಿದಂತೆ 100,000 ಮಂದಿ ಭಾಗವಹಿಸುವ ʻಲಕ್ಷ ಕಂಠ ಗೀತಾ ಪಾರಾಯಣʼ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಶ್ರೀಮದ್ ಭಗವದ್ಗೀತೆಯ ಸಾಮೂಹಿಕ ಪಾರಾಯಣಕ್ಕೆ ಪ್ರಧಾನಮಂತ್ರಿ ಸಾಕ್ಷಿಯಾಗಲಿದ್ದಾರೆ.
ಇದೇ ವೇಳೆ ಪ್ರಧಾನ ಮಂತ್ರಿ ಅವರು ಶ್ರೀ ಕೃಷ್ಣ ದೇಗುಲದ ಗರ್ಭಗುಡಿಯ ಮುಂಭಾಗದಲ್ಲಿರುವ ʻಸುವರ್ಣ ತೀರ್ಥ ಮಂಟಪʼವನ್ನು ಉದ್ಘಾಟಿಸಲಿದ್ದಾರೆ. ಜೊತೆಗೆ, ಕನಕದಾಸರು ಶ್ರೀಕೃಷ್ಣನ ದಿವ್ಯ ದರ್ಶನವನ್ನು ಪಡೆದ ಪವಿತ್ರ ಕಿಟಕಿಯಾದ ʻಕನಕನ ಕಿಂಡಿʼಗೆ ಕನಕ ಕವಚವನ್ನು ಸಮರ್ಪಿಸಲಿದ್ದಾರೆ.
ಈ ಭೇಟಿಯ ಕುರಿತು ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ನನಗೆ ಗೌರವದ ವಿಷಯ. ಗೀತಾ ಪಠಣಕ್ಕಾಗಿ ಸಮಾಜದ ನಾನಾ ವರ್ಗಗಳ ಜನರನ್ನು ಒಂದೆಡೆ ಸೇರಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ. ಈ ಮಠವು ನಮ್ಮ ಸಾಂಸ್ಕೃತಿಕ ಜೀವನದಲ್ಲಿ ಅತ್ಯಂತ ವಿಶೇಷ ಮಹತ್ವವನ್ನು ಹೊಂದಿದೆ. ಶ್ರೀ ಮಧ್ವಾಚಾರ್ಯರಿಂದ ಪ್ರೇರಿತವಾದ ಈ ಮಠವು, ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆ ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa