
ಕೊಪ್ಪಳ , 28 ನವೆಂಬರ್ (ಹಿ.ಸ.) :
ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಸಂಘ, ಕೊಪ್ಪಳ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಗಂಗಾವತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ವೆಂಕಟಗಿರಿ ಇವರ ಸಂಯುಕ್ತಾಶ್ರಯದಲ್ಲಿ ವೆಂಕಟಗಿರಿಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಕುಷ್ಠರೋಗ ಪತ್ತೆ ಹಚ್ಚುವ ಅಭಿಯಾನ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ. ಅವರು ಮಾತನಾಡಿ, ಜಿಲ್ಲೆಯಲ್ಲಿ ನವೆಂಬರ್ 24 ರಿಂದ ಡಿಸೆಂಬರ್ 9 ರವರೆಗೆ ರಾಷ್ಟ್ರೀಯ ಕುಷ್ಠರೋಗ ಪತ್ತೆ ಹಚ್ಚುವ ಅಭಿಯಾನ ಹಾಗೂ ಸಮೀಕ್ಷಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಉದ್ದೇಶ ಜಿಲ್ಲೆಯಲ್ಲಿ ಕುಷ್ಠರೋಗವನ್ನು ಶೀಘ್ರವಾಗಿ ಪತ್ತೆಹಚ್ಚಿ, ಚಿಕಿತ್ಸೆ ನೀಡಿ, ರೋಗ ನಿರ್ಮೂಲನೆ ಮಾಡುವುದಾಗಿದೆ. ಕುಷ್ಠರೋಗ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಮೈಕ್ರೋಬ್ಯಾಕ್ಟೀರಿಯಾ ಲೆಪ್ರೈ ಎಂಬ ಸೂಕ್ಷ್ಮಾಣುವಿಂದ ರೋಗಿಯು ಕೆಮ್ಮುವಾಗ, ಸೀನುವಾಗ, ಸತತ ಸಂಪರ್ಕದಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಮೈಮೇಲೆ ತಿಳಿ-ಬಿಳಿ ತಾಮ್ರವರ್ಣದ ಸ್ಪರ್ಶಜ್ಞಾನವಿಲ್ಲದ ಮಚ್ಚೆ, ಕೈ-ಕಾಲುಗಳಲ್ಲಿ ಜೋಮು ಕಂಡುಬರುವುದು, ಕಣ್ಣುಮುಚ್ಚಲು
ಸಾಧ್ಯವಾಗದಿರುವುದು, ಮುಖ ಮತ್ತು ಕಿವಿಯ ಮೇಲೆ ಎಣ್ಣೆ ಅಂತಹ ಹೊಳಪು ಇರುವ ಲಕ್ಷಣಗಳು ಕಂಡುಬಂದರೆ ತಕ್ಷಣ ತಮ್ಮ ಸಮೀಪದ ಆರೋಗ್ಯ ಇಲಾಖೆಯ ಕ್ಷೇತ್ರ ಸಿಬ್ಬಂದಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ, ಪರೀಕ್ಷಿಸಿಕೊಳ್ಳಬೇಕು. ಯಾವುದೇ ಮಚ್ಚೆ ಇದ್ದರೂ ಅದನ್ನು ಮುಚ್ಚಿಡದೇ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಬೇಕು. ರೋಗ ಖಚಿತಪಟ್ಟರೆ ಉಚಿತವಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ನಮ್ಮ ಜಿಲ್ಲೆಯಲ್ಲಿ 15 ದಿನಗಳ ಕಾಲ ಆಶಾ ಕಾರ್ಯಕರ್ತೆಯರು ಮತ್ತು ಪುರುಷ ಸ್ವಯಂ ಸೇವಕರು ಮನೆ ಮನೆಗೆ ಭೇಟಿ ನೀಡಿ, ಚರ್ಮ ಖಾಯಿಲೆ ಸಮೀಕ್ಷೆ ಮಾಡಲು ಬಂದಾಗ ಅವರಿಗೆ ಸಹಕರಿಸಿ, ಪರೀಕ್ಷಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದೆಂದು ಹೇಳಿದರು.
ಗಂಗಾವತಿಯ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಆಶಾ ಬೇಗಂ ಅವರು ಮಾತನಾಡಿ, ಬಾಲ್ಯವಿವಾಹ ನಿಷೇಧ, ನಾಯಿ ಕಡಿತದಿಂದಾಗುವ ರೇಬಿಸ್ ಖಾಯಿಲೆ ನಿಯಂತ್ರಣ, ಹಾವು ಕಡಿತ ನಿಯಂತ್ರಣ, ಸೊಳ್ಳೆಗಳಿಂದ ಹರಡುವ ಡೆಂಗ್ಯೂ, ಚಿಕನ್‍ಗುನ್ಯಾ, ಮಲೇರಿಯಾ, ಆನೆಕಾಲು ರೋಗ, ಮೆದುಳು ಜ್ವರ ನಿಯಂತ್ರಣ ಕುರಿತು ಮಾತನಾಡಿದರು.
ವೆಂಕಟಗಿರಿಯ ಪ್ರಾಥಮಿಕ ಅರೋಗ್ಯ ಕೇಂದ್ರದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ದೇವಮ್ಮ ಅವರು ಎನ್.ಎಸ್.ವಿ ಪಾಕ್ಷಿಕ, ಕ್ಷಯರೋಗ ನಿರ್ಮೂಲನೆ, ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಮಾತನಾಡಿದರು. ನಂತರ ಕುಷ್ಠರೋಗ ಪತ್ತೆ ಹಚ್ಚುವ ಅಭಿಯಾನ ಕಾರ್ಯಕ್ರಮದ ಭಿತ್ತಿಪತ್ರವನ್ನು ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಆಂಜನೇಯ ನಾಯಕ್, ಉಪಾಧ್ಯಾಕ್ಷರಾದ ರತ್ನಮ್ಮ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿದ್ಯಾವತಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಯಂಕಮ್ಮ, ಸಮುದಾಯ ಆರೋಗ್ಯಾಧಿಕಾರಿ ತಬಸಮ್, ಗ್ರಾ.ಪಂ ಕಾರ್ಯದರ್ಶಿಗಳು, ಸರ್ವಸದಸ್ಯರು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು, ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್