
ಉಡುಪಿ, 28 ನವೆಂಬರ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರ ಉಡುಪಿ ಶ್ರೀಕೃಷ್ಣ ಮಠ ಭೇಟಿ ಇಂದು ಭಕ್ತಿಭಾವ, ಸಂಪ್ರದಾಯ ಮತ್ತು ಆಧ್ಯಾತ್ಮಿಕತೆ ಮಿಳಿತಗೊಂಡ ಐತಿಹಾಸಿಕ ಕ್ಷಣದಂತೆ ಕಂಡಿತು. ಮಠ ಪ್ರವೇಶಿಸಿದ ತಕ್ಷಣ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು ಪ್ರಧಾನಿಗೆ ಮಾಧ್ವ ಸಂಪ್ರದಾಯದ ಹೋಮಮಸಿಯ ವಿಶೇಷ ತಿಲಕ, ಅಂಗಾರಕ ಅಕ್ಷತೆ ಹಾಗೂ ತುಳಸಿಮಣಿ ನೀಡಿ ಗೌರವಿಸಿದರು.
ಪ್ರಧಾನಿ ಮೋದಿ ಕನಕದಾಸರ ವಿಗ್ರಹಕ್ಕೆ ಹೂಮಾಲೆ ಹಾಕಿ ನಮನ ಸಲ್ಲಿಸಿದರು. ಬಳಿಕ ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆದು ಪ್ರಾರ್ಥಿಸಿದರು. “ಶ್ರೀಕೃಷ್ಣನ ಬಳಿಗೆ ಇಂದು ಅರ್ಜುನನಾಗಿ ಪ್ರಧಾನಮಂತ್ರಿ ಬಂದಿದ್ದಾರೆ” ಎಂದು ಸುಗುಣೇಂದ್ರ ತೀರ್ಥರು ಸಂಸ್ಕೃತ ಮಾತಿನಲ್ಲಿ ಪ್ರಶಂಸಿಸಿದರು.
14 ವರ್ಷಗಳ ಹಿಂದೆ ಉಡುಪಿ ಭೇಟಿಯಾದ ಸಂದರ್ಭವನ್ನು ಸ್ಮರಿಸಿದ ಶ್ರೀಗಳು, “ಅಂದು ನಮ್ಮದು ಇಂದ್ರ ಪರ್ಯಾಯ, ಇಂದು ನಾನು ಸುಗುಣೇಂದ್ರ ಮತ್ತು ಅವರು ನರೇಂದ್ರ” ಎಂದು ಹೇಳಿದರು. ಪ್ರಧಾನಿಗೆ ಮಠ ಪರಂಪರೆಯ ಸಂಕೇತವಾದ ಬೆಳ್ಳಿ ಮುಚ್ಚಿದ ‘ಮೊಸರು–ಬೆಣ್ಣೆ ಬೇರ್ಪಡಿಸುವ ಕಡೆಗೋಲು’ ಸನ್ಮಾನವಾಗಿ ನೀಡಲಾಯಿತು.
ಗೀತೋತ್ಸವ ವೇದಿಕೆಯಲ್ಲಿ ಪ್ರಧಾನಿಯವರು ಸ್ವತಃ ಭಗವದ್ಗೀತೆಯ 15ನೇ ಅಧ್ಯಾಯ ಪುರುಷೋತ್ತಮ ಯೋಗವನ್ನು ಪಠಿಸಿ ಅದರ ಸಾರಾಂಶವನ್ನು ವಿವರಿಸಿದರು. “ನಿನ್ನ ಕರ್ಮವನ್ನು ಮಾಡು; ಫಲಾಫಲದ ಚಿಂತೆ ಬಿಡು. ಆತ್ಮ–ಪರಮಾತ್ಮ ತತ್ವವನ್ನು ಗ್ರಹಿಸಿದವನು ಪರಿಪೂರ್ಣತೆಯನ್ನು ಕಾಣುತ್ತಾನೆ” ಎಂದು ಹೇಳಿದರು.
ಉಡುಪಿಯ ಗೀತೋತ್ಸವದಲ್ಲಿ ನಡೆದ ಲಕ್ಷ ಕಂಠ ಗೀತಾ ಪಠಣವನ್ನು ಮೋದಿ ಅತ್ಯಂತ ಮಹತ್ವದ ಆಧ್ಯಾತ್ಮಿಕ ಕ್ಷಣವೆಂದು ವಿಶ್ಲೇಷಿಸಿದರು. “ಒಂದೇ ಸ್ಥಳದಲ್ಲಿ ಇಷ್ಟು ಮಂದಿ ಗೀತೆಯನ್ನು ಪಠಿಸುವುದು ದೇಶಕ್ಕೆ ಹೊಸ ಶಕ್ತಿ ನೀಡಿದೆ. ಈ ಮಹತ್ತರ ಸೇವೆ ಮಾಡಿರುವ ಸುಗುಣೇಂದ್ರ ಸ್ವಾಮೀಜಿಗಳಿಗೆ ನಾನು ಪ್ರಣಾಮ ಸಲ್ಲಿಸುತ್ತೇನೆ” ಎಂದರು.
ಗುಜರಾತ್ ಹಾಗೂ ಉಡುಪಿಯ ನಡುವೆ ಆತ್ಮೀಯ ಆಧ್ಯಾತ್ಮಿಕ ಸಂಬಂಧವಿದೆ ಎಂದು ಸ್ಮರಿಸಿದ ಅವರು, “ಇಲ್ಲಿ ಕೃಷ್ಣನ ದರ್ಶನ ನನಗೆ ಆಂತರಿಕ ಶಾಂತಿ ನೀಡಿದೆ ಎಂದರು.
ಮೂರು ದಿನಗಳ ಹಿಂದೆ ಅಯೋಧ್ಯೆ ಧರ್ಮಧ್ವಜ ಸ್ಥಾಪನೆಗೆ ಹಾಜರಾಗಿದ್ದುದನ್ನು ಉಲ್ಲೇಖಿಸಿದ ಪ್ರಧಾನಿ, “ಅಯೋಧ್ಯೆಯಿಂದ ಉಡುಪಿವರೆಗೆ ರಾಮಭಕ್ತರು ಸಾಕ್ಷಿಯಾಗಿದ್ದಾರೆ” ಎಂದು ಹೇಳಿದರು. ಕನಕದಾಸರ ಸೇವೆಯನ್ನು ಸ್ಮರಿಸಿ, “ನನ್ನಂಥ ಎಲ್ಲಾ ಭಕ್ತರಿಗೆ ಕಿಂಡಿಯ ಮೂಲಕ ದರ್ಶನ ನೀಡುವ ದಾರಿಯನ್ನೇ ತೆರೆಯಲಾಗಿದೆ” ಎಂದು ಮೋದಿ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa