ರೋಣ ಶಾಸಕರಿಗೆ ಸಚಿವ ಸ್ಥಾನ : ಹೈಕಮಾಂಡ್ ವಿರುದ್ಧ ಕೈ ಕಾರ್ಯಕರ್ತರ ಆಕ್ರೋಶ
ಉಪಮುಖ್ಯಮಂತ್ರಿ
ಫೋಟೋ


ಗದಗ, 28 ನವೆಂಬರ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ ಘಟನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನಡುವೆ ಪೈಪೋಟಿ ತೀವ್ರಗೊಂಡಿರುವ ನಡುವೆ, ರೋಣ ಕ್ಷೇತ್ರದ ಕಾರ್ಯಕರ್ತರು ತಮ್ಮ ಶಾಸಕರಿಗೆ ಕಡ್ಡಾಯವಾಗಿ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಅತಿರೇಕದ ಹುಚ್ಚಾಟವೂ ನಡೆದಿದ್ದು, ಕೆಲ ಕಾರ್ಯಕರ್ತರು ಬ್ಲೇಡ್‌ ಬಳಸಿ ಕೈ ಕತ್ತರಿಸಿಕೊಂಡು ರಕ್ತ ಹರಿಸಿರುವುದು, ಮತ್ತೊಬ್ಬರು ತಲೆ ಬೊಳಿಸಿಕೊಂಡು ಆಕ್ರೋಶ ವ್ಯಕ್ತಪಡಿಸಿರುವುದು ಅಲ್ಲಿನ ಜನರನ್ನು ಬೆಚ್ಚಿಬೀಳಿಸಿದೆ. ಹೈಕಮಾಂಡ್‌ಗೆ ಒತ್ತಾಯಪತ್ರವಾಗಿ ಸಾವಿರಕ್ಕೂ ಹೆಚ್ಚು ಪತ್ರಗಳನ್ನು ಕಾರ್ಯಕರ್ತರು ಬರೆದು ಸಲ್ಲಿಸಿದ್ದಾರೆ.

ಸಿದ್ಧಾರೂಢ ಮಠದಿಂದ ಆರಂಭವಾದ ಮೆರವಣಿಗೆ ರೋಣ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು. “ರೋಣ ಕ್ಷೇತ್ರಕ್ಕೆ ವರ್ಷಗಳಿನಿಂದ ಅನ್ಯಾಯವಾಗುತ್ತಿದೆ, ಸಚಿವ ಸ್ಥಾನ ಸಿಗಬೇಕು” ಎಂದು ಕಾರ್ಯಕರ್ತರು ಘೋಷಣೆ ಕೂಗಿದರು.

78 ವರ್ಷದ ಜಿ.ಎಸ್. ಪಾಟೀಲರು 50 ವರ್ಷಗಳ ರಾಜಕೀಯ ಬದುಕಿನಲ್ಲಿ 8 ಬಾರಿ ಸ್ಪರ್ಧಿಸಿ, 4 ಬಾರಿ ಶಾಸಕರಾಗಿ ಆಯ್ಕೆಗೊಂಡಿದ್ದಾರೆ. “ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ರೋಣ ಕ್ಷೇತ್ರಕ್ಕೆ ಸೂಕ್ತ ಪ್ರಾಮುಖ್ಯತೆ ನೀಡಿಲ್ಲ” ಎಂಬುದು ಕಾರ್ಯಕರ್ತರ ಆರೋಪ. ಈ ಬಾರಿ ಸಚಿವ ಸ್ಥಾನ ನೀಡದಿದ್ದರೆ “ಬೆಂಗಳೂರು, ದೆಹಲಿ ಚಲೋ” ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಯುವ ಕಾರ್ಯಕರ್ತ ಶಹಬಾಜ್, ಅಭಿಷೇಕ ನವಲಗುಂದ ಸೇರಿದಂತೆ ಹಲವರು ಮಾತನಾಡಿ, “ಸಿಎಂ–ಡಿಸಿಎಂ ಇಬ್ಬರೂ ರೋಣ ಭೇಟಿ ವೇಳೆ ನೀಡಿದ ಭರವಸೆ ಈಡೇರಿಸಬೇಕು” ಎಂದು ಆಗ್ರಹಿಸಿದರು. ಮಹಿಳಾ ಕಾರ್ಯಕರ್ತೆಯರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ಪಾಟೀಲರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು.

ಮುಖ್ಯಮಂತ್ರಿ–ಉಪ ಮುಖ್ಯಮಂತ್ರಿ ನಡುವಿನ ಹಗ್ಗಜಗ್ಗಾಟದ ನಡುವೆ ರೋಣದಿಂದ ವ್ಯಕ್ತವಾಗಿರುವ ಈ ಅಸಮಾಧಾನ ಸರ್ಕಾರಕ್ಕೆ ಮತ್ತೊಂದು ಸವಾಲಾಗಿ ಪರಿಣಮಿಸಿದೆ. ಈ ರಾಜಕೀಯ ಒತ್ತಡ ಅಂತಿಮವಾಗಿ ಯಾವತ್ತಿಗೆ ತಿರುಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande