
ಗದಗ, 28 ನವೆಂಬರ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಆರಂಭಿಸಲು ಆಗ್ರಹಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಹೋರಾಟ 14ನೇ ದಿನಕ್ಕೆ ತಲುಪಿದ್ದು, ಹೋರಾಟಕ್ಕೆ ಹೊಸ ತೀವ್ರತೆ ಬಂದಿದೆ. ತಾಲೂಕು ಮಟ್ಟದಲ್ಲಿ ಸಾವಿರಾರು ಮೆಕ್ಕೆಜೋಳ ಬೆಳೆದಿರುವ ರೈತರು ಖರೀದಿ ಕೇಂದ್ರ ಆರಂಭವಾಗದೆ ವಿಪರೀತ ನಷ್ಟಕ್ಕೆ ಒಳಗಾಗುತ್ತಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಪೊರಕೆ ಚಳುವಳಿ, ಜಾಗೃತಿ ಮೆರವಣಿಗೆ ಸೇರಿದಂತೆ ಹಲವು ರೀತಿಯ ಪ್ರತಿಭಟನೆಗಳನ್ನು ರೈತರು ಹಮ್ಮಿಕೊಂಡಿದ್ದು, ಸರ್ಕಾರದ ನಿಷ್ಕ್ರಿಯತೆಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರ ನಡುವೆ, ಗವಿಮಠದ ಡಾ. ಕುಮಾರ ಮಹಾರಾಜರು ಹೋರಾಟಗಾರ ರೈತರೊಂದಿಗೆ ಭೇಟಿ ಮಾಡಿ ಅವರಿಗೆ ಬೆಂಬಲ ನೀಡಿದ್ದಾರೆ. ಹಿಂದೆ ತಮ್ಮ ಉಪನ್ಯಾಸ ಸತ್ಯಾಗ್ರಹದ ಒತ್ತಡಕ್ಕೀಡಾಗಿ ಸರ್ಕಾರ 10 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಗೆ ಗ್ರೀನ್ ಸಿಗ್ನಲ್ ನೀಡಿದೆ.. ಆದರೆ ಈವರಿಗೆ ಕೇಂದ್ರ ಆರಂಭವಾಗದೆ ರೈತರು ಸಂಕಷ್ಟದಲ್ಲಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
“ನಾಳೆಯಿಂದ ಉಪವಾಸ ಸತ್ಯಾಗ್ರಹ ಆರಂಭಿಸುವೆವು. ಆರಂಭಿಸಿದರೆ ಕೈಬಿಡೋ ಪ್ರಶ್ನೆಯೇ ಇಲ್ಲ,” ಎಂದು ಡಾ. ಕುಮಾರ ಮಹಾರಾಜರು ಸರ್ಕಾರಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿದರು. ರೈತರ ಬೇಡಿಕೆಗಳನ್ನು ವಿಳಂಬ ಮಾಡುತ್ತಿರುವ ಇಲಾಖೆಯ ಮೇಲೂ ಅವರು ತೀವ್ರ ಆಕ್ರೋಶ ಹೊರಹಾಕಿದರು.
ತಕ್ಷಣವೇ ಖರೀದಿ ಕೇಂದ್ರ ಆರಂಭಿಸಿ, ರೈತರ ಉತ್ಪನ್ನಕ್ಕೆ ನ್ಯಾಯಯುತ ಬೆಲೆ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡಿಲ್ಲ ಎಂದರೆ ಹೋರಾಟ ಮತ್ತಷ್ಟು ಉಗ್ರಗೊಳ್ಳುವ ಸಾಧ್ಯತೆ ಇರುವುದಾಗಿ ಸಂಘಟಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP