
ನವದೆಹಲಿ, 28 ನವೆಂಬರ್ (ಹಿ.ಸ.) :
ಆ್ಯಂಕರ್ : ಮಧ್ಯ ಪ್ರದೇಶದಲ್ಲಿ ಹರ್ ಘರ್ ಜಲ್ – ಜಲ ಜೀವನ್ ಮಿಷನ್ ಅನುಷ್ಠಾನದಲ್ಲಿ ಭಾರಿ ಅಕ್ರಮಗಳು ನಡೆದಿರುವುದು ಬಯಲಾಗಿದ್ದು, ರಾಜ್ಯ ಸರ್ಕಾರ ಭ್ರಷ್ಟಾಚಾರವನ್ನು ಹತ್ತಿಕ್ಕಲು ಕಠಿಣ ಕ್ರಮ ಕೈಗೊಂಡಿದೆ. ಯೋಜನೆಗೆ ಸಂಬಂಧಿಸಿದಂತೆ 280 ಏಜೆನ್ಸಿಗಳು ಮತ್ತು 22 ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದ್ದು, ಅನುಮಾನಾಸ್ಪದ ಒಪ್ಪಂದಗಳು ರದ್ದಾಗಿವೆ. ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆಸಿದ 10 ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ನಕಲಿ ಖಾತೆಗಳು ಹಾಗೂ ಬ್ಯಾಂಕ್ ಗ್ಯಾರಂಟಿಗಳ ಪ್ರಕರಣಗಳನ್ನು ಸಿಬಿಐಗೆ ಹಸ್ತಾಂತರಿಸಲಾಗಿದೆ.
ಜಲ ಜೀವನ್ ಮಿಷನ್ 2020ರಿಂದ ಮಧ್ಯ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಗುರಿಯೊಂದಿಗೆ ಯೋಜನೆ ಜಾರಿಯಲ್ಲಿದೆ. ಆದರೆ ಹಲವು ವರ್ಷಗಳಿಂದ ದೂರುಗಳು ಸರ್ಕಾರಕ್ಕೆ ತಲುಪುತ್ತಿದ್ದರೂ ಅವುಗಳನ್ನು ನಿರ್ಲಕ್ಷಿಸಲಾಗುತ್ತಿತ್ತು. ಇತ್ತೀಚೆಗೆ ದೂರುಗಳು ದೊಡ್ಡ ಪ್ರಮಾಣದಲ್ಲಿ ಸೇರಿ ಬಂದ ಪರಿಣಾಮ ಸರ್ಕಾರ ಸಂಪೂರ್ಣ ತನಿಖೆ ನಡೆಸಲು ಸೂಚಿಸಿತು.
ತನಿಖೆಯಲ್ಲಿ ಬಯಲಾದ ಅಕ್ರಮಗಳು:
ಪರಿಶೀಲನೆಯ ವೇಳೆ ಏಜೆನ್ಸಿಗಳು, ಗುತ್ತಿಗೆದಾರರು ಮತ್ತು ಕೆಲವು ಅಧಿಕಾರಿಗಳು ಒಪ್ಪಂದ ಮಾಡಿಕೊಂಡು ನಕಲಿ ಡಿಪಿಆರ್, ನಕಲಿ ಖಾತೆಗಳು, ಕಳಪೆ ಕಾಮಗಾರಿಗಳು ಹಾಗೂ ಟೆಂಡರ್ ಉಲ್ಲಂಘನೆಗಳನ್ನು ಮಾಡಿರುವುದು ಪತ್ತೆಯಾಗಿದೆ.
ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ. ನರಹರಿ ಅವರು,
ಎಲ್ಲ ಅಕ್ರಮಗಳನ್ನು ಪಾರದರ್ಶಕವಾಗಿ ತನಿಖೆ ಮಾಡಲಾಗಿದೆ. ತಪ್ಪಿತಸ್ಥರ ವಿರುದ್ಧ ದೃಢ ಕ್ರಮ ಕೈಗೊಳ್ಳಲಾಗಿದೆ. ಜಲ ಜೀವನ್ ಮಿಷನ್ ಗುರಿಗಳನ್ನು 100% ಸಾಧಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಕೈಗೊಂಡ ಪ್ರಮುಖ ಕ್ರಮಗಳು:
280 ವಂಚಕ ಏಜೆನ್ಸಿಗಳು ಹಾಗೂ 22 ಗುತ್ತಿಗೆದಾರರಿಗೆ ಕಪ್ಪುಪಟ್ಟಿ
ಅವರ ಎಲ್ಲಾ ಒಪ್ಪಂದಗಳ ರದ್ದು
ತಪ್ಪು ಡಿಪಿಆರ್ ಸಿದ್ಧಗೊಳಿಸಿದ 141 ಅಧಿಕಾರಿಗಳಿಗೆ ನೋಟಿಸ್
187 ಏಜೆನ್ಸಿಗಳಿಗೆ ನೋಟಿಸ್
ಟೆಂಡರ್ ಉಲ್ಲಂಘನೆ ಮಾಡಿದ 10 ಅಧಿಕಾರಿಗಳ ವಿರುದ್ದ ಕ್ರಮ
ನಕಲಿ ಬ್ಯಾಂಕ್ ಗ್ಯಾರಂಟಿ ಪ್ರಕರಣದಲ್ಲಿ ಗುತ್ತಿಗೆದಾರರ ವಜಾ,
30 ಕೋಟಿ ರೂ. ದಂಡ
ಸಂಪೂರ್ಣ ಪ್ರಕರಣ ಸಿಬಿಐ ತನಿಖೆಗೆ ಹಸ್ತಾಂತರ
ಇದಲ್ಲದೇ, ಜಿಲ್ಲಾವಾರು ಪರಿಶೀಲನಾ ಸಮಿತಿಗಳನ್ನು ರಚಿಸಿ, 8,358 ಏಕ-ಹಳ್ಳಿ ಟ್ಯಾಪ್ ನೀರಿನ ಯೋಜನೆಗಳನ್ನು ಮರುಪರಿಶೀಲಿಸಲಾಗಿದೆ.
‘ಶೂನ್ಯ ಸಹಿಷ್ಣುತೆ’ ನೀತಿ:
ಮುಖ್ಯ ಕಾರ್ಯದರ್ಶಿ ಅನುರಾಗ್ ಜೈನ್ ಅವರು, ಜಲ ಜೀವನ್ ಮಿಷನ್ ಕಾರ್ಯಗಳಲ್ಲಿ ಯಾವುದೇ ನಿರ್ಲಕ್ಷ್ಯವನ್ನು ಸರ್ಕಾರ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ 80.52 ಲಕ್ಷ ಮನೆಗಳಿಗೆ ಟ್ಯಾಪ್ ನೀರಿನ ಸಂಪರ್ಕ ಒದಗಿಸಲಾಗಿದ್ದು, ಇದು ಗುರಿಯ 72% ಸಾಧನೆ ಎಂದು ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.
ಯೋಜನೆಯಲ್ಲಿ ಜಾರಿಗೆ ಬಂದಿರುವ ಗಂಭೀರ ಗೊಂದಲಗಳು
ಒಂದೇ ಹಳ್ಳಿಯ ಟ್ಯಾಪ್ ನೀರಿನ ಯೋಜನೆಗಳಡಿ ಹಲವಾರು ಹಳ್ಳಿಗಳನ್ನು ತಪ್ಪಿಸಲು ಅಥವಾ ಕೈಬಿಡಲು ಕೆಲವು ಅಧಿಕಾರಿಗಳು ಮತ್ತು ಏಜೆನ್ಸಿಗಳು ಪ್ರಯತ್ನಿಸಿರುವುದು ಪತ್ತೆಯಾಗಿದೆ. ಇದರಿಂದ ಅನೇಕ ಗ್ರಾಮೀಣ ಕುಟುಂಬಗಳು ಇನ್ನೂ ಟ್ಯಾಪ್ ನೀರಿನ ಸೌಲಭ್ಯಗಳಿಂದ ವಂಚಿತರಾಗಿರುವ ಬಗ್ಗೆ ದೂರುಗಳು ಹೆಚ್ಚುತ್ತಿವೆ.
ಸರ್ಕಾರದ ಸ್ಪಷ್ಟ ಸಂದೇಶ:
ಯೋಜನೆಯಲ್ಲಿ ಗುಣಮಟ್ಟ, ಪಾರದರ್ಶಕತೆ ಮತ್ತು ಹೊಣೆಗಾರಿಕೆ ಮುಖ್ಯ ಆದ್ಯತೆಗಳಾಗಿರಲಿವೆ.
ಯಾರೇ ಆಗಿರಲಿ ಅಧಿಕಾರಿಗಳು, ಏಜೆನ್ಸಿಗಳು, ಗುತ್ತಿಗೆದಾರರ ಅಕ್ರಮಕ್ಕೆ ಅವಕಾಶವಿಲ್ಲ ಎಂಬುದನ್ನು ರಾಜ್ಯ ಸರ್ಕಾರ ಈ ಕ್ರಮಗಳ ಮೂಲಕ ಸ್ಪಷ್ಟಪಡಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa