
ಬೆಂಗಳೂರು, 27 ನವೆಂಬರ್ (ಹಿ.ಸ.) :
ಆ್ಯಂಕರ್ : ಅತ್ಯಂತ ಅಪರೂಪದ ಆನುವಂಶಿಕ ರಕ್ತಸ್ರಾವ ತೊಂದರೆ ‘ಸಿವಿಯರ್ ಫ್ಯಾಕ್ಟರ್ VII ಡಿಫಿಷಿಯೆನ್ಸಿ’ ಹೊಂದಿದ್ದ ಭೂತಾನ್‌ನ ಯುವಕನಿಗೆ ಪಶ್ಚಿಮ ಬಂಗಾಳದ ಮುಕುಂದಪುರದ ನಾರಾಯಣ ಆರ್‌ಎನ್ ಟಾಗೋರ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಮೂತ್ರಪಿಂಡ ಕಸಿ ನಡೆಯಿತು. ಇದೇ ರೋಗ ಹೊಂದಿದ್ದ ತಂದೆಯೇ ದಾನಿ ಆಗಿದ್ದ ಈ ವಿಶಿಷ್ಟ ಶಸ್ತ್ರಚಿಕಿತ್ಸೆ ವಿಶ್ವದಲ್ಲೇ ಮೊಟ್ಟಮೊದಲ ಬಾರಿಗೆ ಯಶಸ್ಸು ಪಡೆದ ಪ್ರಕರಣವಾಗಿದೆ.
ಜಗತ್ತಿನಲ್ಲಿ 50 ಲಕ್ಷ ಜನರಲ್ಲಿ ಒಬ್ಬರಿಗೆ ಮಾತ್ರ ಕಾಣಿಸುವ ಈ ತೊಂದರೆಯ ಹಿನ್ನೆಲೆ, ಶಸ್ತ್ರಚಿಕಿತ್ಸೆ ವೈದ್ಯಕೀಯವಾಗಿ ಅತ್ಯಂತ ಅಪಾಯಕಾರಿ ಮತ್ತು ಸಂಕೀರ್ಣವಾಗಿತ್ತು. ಪ್ರಕ್ರಿಯೆಯನ್ನು ಮುನ್ನಡೆಸಿದ ಮುಖ್ಯ ನೆಫ್ರಾಲಜಿಸ್ಟ್ ಡಾ. ದೀಪಕ್ ಶಂಕರ್ ರೇ ಹೇಳುವಂತೆ, “ಚಿಕ್ಕ ರಕ್ತಸ್ರಾವವೂ ಜೀವಕ್ಕೆ ಅಪಾಯವಾಗುವ ಪರಿಸ್ಥಿತಿಯಲ್ಲಿ ಮೂತ್ರಪಿಂಡ ಕಸಿ ಮಾಡಬೇಕಾಗಿತ್ತು. ಅರಿವಳಿಕೆಯಿಂದ ಹಿಡಿದು ಹೊಲಿಗೆಯವರೆಗೆ ಪ್ರತಿಯೊಂದು ಹಂತವೂ ನಿಖರ ಸಮನ್ವಯತೆಯನ್ನು ಸಾಧಿಸಲಾಯಿತು ಇದು ನಮ್ಮ ತಂಡದ ಸಾಮೂಹಿಕ ಶ್ರಮದ ಗೆಲುವು ಎಂದಿದ್ದಾರೆ.
ಫ್ಯಾಕ್ಟರ್ VII ಡಿಫಿಷಿಯೆನ್ಸಿ ನಿಗೂಢ ಮತ್ತು ಅಪರೂಪ. ರಕ್ತಸ್ರಾವ ಮತ್ತು ಹೆಪ್ಪುಗಟ್ಟುವಿಕೆ ನಡುವಿನ ಸಮತೋಲನವನ್ನು ಉಳಿಸುವುದು ಒಂದು ಕ್ಷಣದ ತಪ್ಪಿಗೂ ಅವಕಾಶ ಇರದ ಕೆಲಸ. ಇಬ್ಬರೂ ಈಗ ಸುರಕ್ಷಿತವಾಗಿರುವುದು ನಮ್ಮ ತಂಡಕ್ಕೆ ದೊಡ್ಡ ಸಂತೋಷ ಎಂದು ಹೆಮಟಾಲಜಿ ತಜ್ಞ ಡಾ. ಶಿಶಿರ್ ಕುಮಾರ್ ಪಾತ್ರ ಹೇಳಿದ್ದಾರೆ.
ಶಸ್ತ್ರಚಿಕಿತ್ಸೆಯ ನಂತರ ರೋಗಿಗೆ ತಾತ್ಕಾಲಿಕ ಪಾರ್ಶ್ವವಾಯು ಉಂಟಾದರೂ, ನೆಫ್ರಾಲಜಿ–ನ್ಯೂರಾಲಜಿ–ಹೆಮಟಾಲಜಿ ತಜ್ಞರ ಸಂಯುಕ್ತ ಆರೈಕೆಯಿಂದ ಪೂರ್ಣ ಚೇತರಿಕೆ ಕಂಡಿದ್ದಾರೆ. ಈಗ ರೋಗಿಯ ಕ್ರಿಯೇಟಿನಿನ್ ಮಟ್ಟ ಸ್ಥಿರವಾಗಿದ್ದು, ತಂದೆ-ಮಗ ಇಬ್ಬರೂ ಆರೋಗ್ಯಕರ ಸ್ಥಿತಿಯಲ್ಲಿದ್ದಾರೆ.
ನಾರಾಯಣ ಹೆಲ್ತ್ ಈಸ್ಟ್ ನಿರ್ದೇಶಕ ಅಭಿಜಿತ್ ಸಿ.ಪಿ. ಅವರು, ಈ ಸಾಧನೆ ಪೂರ್ವ ಭಾರತದ ವೈದ್ಯಕೀಯ ಸಾಮರ್ಥ್ಯಕ್ಕೆ ವಿಶ್ವಮಟ್ಟದ ಗುರುತಿನ ಚಿಹ್ನೆಯಾಗಿದೆ ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa