
ನವದೆಹಲಿ, 27 ನವೆಂಬರ್ (ಹಿ.ಸ.) :
ಆ್ಯಂಕರ್ : ಭಾರತೀಯ ಬಾಹ್ಯಾಕಾಶ ಸ್ಟಾರ್ಟ್ಅಪ್ ಸ್ಕೈರೂಟ್‌ನ ಇನ್ಫಿನಿಟಿ ಕ್ಯಾಂಪಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು.
ಕಳೆದ ಕೆಲವು ವರ್ಷಗಳಲ್ಲಿ ಭಾರತದ ಬಾಹ್ಯಾಕಾಶ ವಲಯವು ಮುಕ್ತ, ಸಹಯೋಗ ಮತ್ತು ನಾವೀನ್ಯತೆ ಚಾಲಿತ ಆರ್ಥಿಕತೆಯಾಗಿ ರೂಪಾಂತರಗೊಂಡಿದೆ ಎಂದು ಅವರು ಹೇಳಿದರು.
ಬಾಹ್ಯಾಕಾಶ ವಲಯವನ್ನು ಖಾಸಗಿ ಕ್ಷೇತ್ರಕ್ಕೆ ತೆರೆದಿಟ್ಟ ಪರಿಣಾಮವಾಗಿ ದೇಶದ ಯುವಕರು, ವಿಶೇಷವಾಗಿ ‘ಜನರೇಷನ್ ಜಿ’, ಅಪಾರ ಅವಕಾಶಗಳನ್ನು ಪಡೆಯುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು.
ಭಾರತಕ್ಕೆ ನುರಿತ ಎಂಜಿನಿಯರ್‌ಗಳು, ಉತ್ತಮ ಉತ್ಪಾದನಾ ವ್ಯವಸ್ಥೆ, ವಿಶ್ವದ ಅತ್ಯುತ್ತಮ ಉಡಾವಣಾ ತಾಣ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವ ಮನೋಭಾವನೆ ಇರುವುದರಿಂದ ಜಾಗತಿಕ ಮಟ್ಟದಲ್ಲಿ ಭಾರತದ ಸಾಮರ್ಥ್ಯ ಹೆಚ್ಚುತ್ತಿದೆ ಎಂದು ಹೇಳಿದರು.
ಪ್ರಧಾನಿ ಸ್ಕೈರೂಟ್‌ನ ಮೊದಲ ಕಕ್ಷೀಯ ರಾಕೆಟ್ ವಿಕ್ರಮ್–1 ಅನ್ನು ಅನಾವರಣಗೊಳಿಸಿದರು. ತಿಂಗಳಿಗೆ ಒಂದು ಕಕ್ಷೀಯ ರಾಕೆಟ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಈ ಕ್ಯಾಂಪಸ್ ಸುಮಾರು 20,000 ಚದರ ಅಡಿ ವ್ಯಾಪ್ತಿಯ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿದೆ.
ಇಸ್ರೋವನ್ನು ಶ್ಲಾಘಿಸಿದ ಅವರು, ಭಾರತದ ಬಾಹ್ಯಾಕಾಶ ಪ್ರತಿಭೆ ವಿಶ್ವದೆದುರು ಬಲವಾದ ಛಾಪು ಮೂಡಿಸುತ್ತಿದೆ ಎಂದು ಹೇಳಿದರು. ಸಣ್ಣ ಉಪಗ್ರಹಗಳ ಜಾಗತಿಕ ಬೇಡಿಕೆ ಹೆಚ್ಚುತ್ತಿರುವುದರಿಂದ ಮುಂದಿನ ವರ್ಷಗಳಲ್ಲಿ ಬಾಹ್ಯಾಕಾಶ ಆರ್ಥಿಕತೆ ವೇಗವಾಗಿ ವಿಸ್ತರಿಸುವ ಸಾಧ್ಯತೆ ಇದೆ. ಇದು ಭಾರತದ ಯುವಕರಿಗೆ ದೊಡ್ಡ ಅವಕಾಶ ಎಂದು ಪ್ರಧಾನಿ ಅಭಿಮತ ವ್ಯಕ್ತಪಡಿಸಿದರು.
ಐಐಟಿ ಪದವೀಧರರು ಹಾಗೂ ಮಾಜಿ ಇಸ್ರೋ ವಿಜ್ಞಾನಿಗಳಾದ ಪವನ್ ಚಂದನಾ ಮತ್ತು ಭರತ್ ಢಾಕಾ ಸ್ಥಾಪಿಸಿದ ಸ್ಕೈರೂಟ್, 2022ರಲ್ಲಿ ವಿಕ್ರಮ್–ಎಸ್ ರಾಕೆಟ್ ಉಡಾವಣೆ ಮೂಲಕ ಬಾಹ್ಯಾಕಾಶಕ್ಕೆ ರಾಕೆಟ್ ಉಡಾಯಿಸಿದ ಮೊದಲ ಭಾರತೀಯ ಖಾಸಗಿ ಕಂಪನಿಯಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa