
ಗದಗ, 27 ನವೆಂಬರ್ (ಹಿ.ಸ.) :
ಆ್ಯಂಕರ್ : ಗದಗ-ಬೆಟಗೇರಿ ನೆಲದಲ್ಲಿ ನಡೆದ ನಾರಾಯಣ ವನ್ನಾಲ ಅವರ ಅಂಗಾಂಗ ದಾನದ ಘಟನೆಯು ಕೇವಲ ವೈದ್ಯಕೀಯ ಕ್ಷೇತ್ರದ ಯಶಸ್ಸು ಮಾತ್ರವಲ್ಲ, ಅದು ಮಾನವೀಯ ಮೌಲ್ಯಗಳ ಮರು ಸ್ಥಾಪನೆಯಾಗಿ ಗದಗ ಜಿಲ್ಲೆಯಲ್ಲಿ ದಾಖಲೆಯಾಗಿ ಉಳಿದಿದೆ.
ದುಃಖಭರಿತ ಕುಟುಂಬವೇ, ತಮ್ಮ ದುಖವನ್ನೆಲ್ಲಾ ಮರೆತು, ನಾಲ್ಕು ಜೀವಗಳಿಗೆ ಹೊಸ ಆಶಾಕಿರಣ ನೀಡಿದ ತ್ಯಾಗವು, ಸಮಾಜ ಮತ್ತು ಸರ್ಕಾರ ಹೇಗೆ ಪ್ರತಿಕ್ರಿಯಿಸಬೇಕು ಎಂಬುದಕ್ಕೆ ಒಂದು ಆದರ್ಶಪ್ರಾಯ ಘಟನೆಯಾಗಿ ಹೊರಹೊಮ್ಮಿದೆ.
ನೋವಿನ ಮನೆಯನ್ನು ಸಂತೈಸಿದ ಸಚಿವರ ಹೆಜ್ಜೆ
ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು ಈ ಘಟನೆಯ ಮಹತ್ವವನ್ನು ತಕ್ಷಣ ಅರಿತು ಅಂಗಾಗ ದಾನ ಮಾಡಿದವರ ಮನೆಗೆ ತೆರಳಿ ವಿಶೇಷ ರೀತಿಯ ಸಮಾಧಾನ ಹೇಳಿದ್ದಾರೆ.
ಸಾಮಾನ್ಯವಾಗಿ ಇಂತಹ ಸನ್ಮಾನಗಳು ಸಾರ್ವಜನಿಕ ವೇದಿಕೆಗಳಲ್ಲಿ ನಡೆಯುತ್ತವೆ. ಆದರೆ, ನೋವಿನಲ್ಲಿ ಮುಳುಗಿರುವ ವನ್ನಾಲ ಕುಟುಂಬದವರು ವೇದಿಕೆಗೆ ಬರುವುದು ಅವರಿಗೆ ಇನ್ನಷ್ಟು ಕಷ್ಟ ನೀಡಬಹುದು ಎಂದು ಮನಗಂಡ ಸಚಿವರು, ತಾವೇ ಖುದ್ದಾಗಿ ವನ್ನಾಲ ಅವರ ಮನೆಗೆ ತೆರಳುವ ಅಪರೂಪದ ಮತ್ತು ಅತ್ಯಂತ ಸಂವೇದನಾಶೀಲ ನಿರ್ಧಾರ ಕೈಗೊಂಡರು.
ನಾಲ್ಕು ಜೀವಗಳಿಗೆ ಹೊಸ ಜೀವನ ನೀಡಿದ ಕುಟುಂಬದ ಮುಂದೆ ನಮ್ಮ ಗೌರವ ಅತಿ ಸಣ್ಣದು. ಆದರೆ, ಅವರ ತ್ಯಾಗಕ್ಕೆ ಪ್ರತಿಯಾಗಿ ಇಡೀ ಸಮಾಜ ಅವರಿಗೆ ಋಣಿಯಾಗಿದೆ ಎಂಬ ಭಾವನೆಯೊಂದಿಗೆ ಸಚಿವರು, ವನ್ನಾಲ ಅವರ ಪತ್ನಿ, ತಂದೆ ಮತ್ತು ತಾಯಿ ಅವರಿಗೆ ಗೌರವ ಸಲ್ಲಿಸಿ, ಸಾಂತ್ವನ ಹೇಳಿದರು.
ರಾಜಕೀಯ ನಾಯಕರೊಬ್ಬರು ಅಧಿಕಾರದ ಚೌಕಟ್ಟನ್ನು ಮೀರಿ, ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ಕುಟುಂಬದ ಮನೆಬಾಗಿಲಿಗೆ ಹೋಗಿ ಕೃತಜ್ಞತೆ ಸಲ್ಲಿಸಿದ್ದು, ಸಚಿವ ಎಚ್.ಕೆ. ಪಾಟೀಲರ ಸಂವೇದನಾಶೀಲ ಆಡಳಿತ ಮತ್ತು ಜನಪರ ಕಾಳಜಿಯ ಪ್ರತೀಕವಾಗಿ ನಿಂತಿದೆ. ಅವರ ಈ ನಡೆ, ಕುಟುಂಬದ ದುಃಖಕ್ಕೆ ಸ್ವಲ್ಪ ಮಟ್ಟಿಗಿನ ನೆಮ್ಮದಿಯನ್ನು ನೀಡಿದೆ.
ಬ್ರಹ್ಮಾಂಡದ ಸಂಕಲ್ಪಕ್ಕೆ ವೈದ್ಯಕೀಯ ತಂಡದ ಶ್ರಮ
ಈ ಮಹತ್ತರ ಕಾರ್ಯ ಯಶಸ್ವಿಯಾಗಲು ಕೆ.ಎಚ್. ಪಾಟೀಲ ಆಸ್ಪತ್ರೆಯ ವೈದ್ಯರ ತಂಡ ಮತ್ತು ಸಚಿವರ ಸೇವಾ ತಂಡದ ಸಮನ್ವಯ ಶ್ರಮ ಅಗಾಧ. ಡಾ. ಅವಿನಾಶ ಓದುಗೌಡರ ನೇತೃತ್ವದ ವೈದ್ಯಕೀಯ ತಂಡವು, ಸಕಾಲದಲ್ಲಿ ಅಂಗಾಂಗಗಳನ್ನು ಪಡೆದು, ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿತು. ಕಿಡ್ನಿ ಟ್ರಾನ್ಸ್‌ಪ್ಲಾಂಟ್ ವಿಭಾಗದ ಡಾ. ಭುವನೇಶ ಆರಾಧ್ಯ, ಡಾ. ಪವನ ಕೋಳಿವಾಡ, ಡಾ. ದೀಪಕ ಕುರಹಟ್ಟಿ, ಡಾ. ನಿಯಾಜ್, ಡಾ. ವಿನಾಯಕ ಪಂಚಗಾರ ಸೇರಿದಂತೆ ಸಂಪೂರ್ಣ ತಂಡವು ಗಡಿಯಾರದ ಮುಳ್ಳಿನೊಂದಿಗೆ ಸ್ಪಂದಿಸಿ ಕಾರ್ಯ ನಿರ್ವಹಿಸಿದ್ದು, ಅವರ ವೃತ್ತಿಪರ ಬದ್ಧತೆಯನ್ನು ಸಚಿವ ಪಾಟೀಲರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಅಂಗಾಂಗಗಳನ್ನು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಶೀಘ್ರವಾಗಿ ತಲುಪಿಸಲು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಎಸ್ಪಿ ರೋಹನ ಜಗದೀಶ ಅವರು ಗ್ರೀನ್ ಕಾರಿಡಾರ್ ಸಂಚಾರ ಮುಕ್ತ ದಾರಿ ಏರ್ಪಾಡು ಮಾಡಿದ್ದು, ಸರ್ಕಾರಿ ಇಲಾಖೆಗಳು ಮಾನವೀಯ ಉದ್ದೇಶಕ್ಕಾಗಿ ಹೇಗೆ ಒಗ್ಗೂಡಬಹುದು ಎಂಬುದನ್ನು ಕೂಡಾ ಸಚಿವ ಎಚ್.ಕೆ.ಪಾಟೀಲರು ಈ ಪ್ರಕರಣದಲ್ಲಿ ತೋರಿಸಿಕೊಟ್ಟಿದ್ದಾರೆ.
ನಾರಾಯಣನ ತ್ಯಾಗವೀಗ, ಜಾಗೃತಿಯ ಜ್ಯೋತಿ
ನಾರಾಯಣ ವನ್ನಾಲ ಅವರು ದಾನದ ಮೂಲಕ ನಾಲ್ಕು ಜೀವಗಳಲ್ಲಿ ಜೀವಂತವಾಗಿದ್ದಾರೆ. ಅವರ ಕುಟುಂಬದವರ ಈ ತ್ಯಾಗವು ಗದಗ ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ ಎಂದರೆ ತಪ್ಪಾಗಲಾರದು. ಈ ಘಟನೆಯಿಂದ ಪ್ರೇರಿತರಾದ ಗದಗ-ಬೆಟಗೇರಿಯ ಹಿರಿಯ ವೈದ್ಯರೆಲ್ಲರೂ ಒಗ್ಗೂಡಿ, ಇನ್ನು ಮುಂದೆ ಪ್ರತಿಯೊಂದು ಬ್ರೇನ್ ಡೆಡ್ ಪ್ರಕರಣದಲ್ಲೂ ಕುಟುಂಬಸ್ಥರನ್ನು ಮನವೊಲಿಸಿ ಅಂಗಾಂಗ ದಾನಕ್ಕೆ ಪ್ರೋತ್ಸಾಹಿಸಲು ಸಂಕಲ್ಪ ಮಾಡಿದ್ದಾರೆ. ವೈದ್ಯರು ಎದುರಿಸುತ್ತಿರುವ ಸವಾಲುಗಳನ್ನು ನಿವಾರಿಸಲು ಮತ್ತು ಐಸಿಯುಗಳ ಮುಂದೆ ಜಾಗೃತಿ ಭಿತ್ತಿ ಪತ್ರಗಳನ್ನು ಅಳವಡಿಸಲು ಚರ್ಚಿಸಿರುವುದು, ಈ ಮಹಾನ್ ತ್ಯಾಗದ ಫಲವಾಗಿ ಒಂದು ಸಮಗ್ರ ಬದಲಾವಣೆಯ ಅಲೆ ಆರಂಭವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ನಾರಾಯಣ ವನ್ನಾಲ ಅವರ ತ್ಯಾಗ, ಸಚಿವ ಎಚ್.ಕೆ. ಪಾಟೀಲರ ಸಂವೇದನಾಶೀಲತೆ ಮತ್ತು ವೈದ್ಯಕೀಯ ತಂಡದ ಅಸಾಧಾರಣ ಸೇವೆ, ಈ ಮೂರು ಅಂಶಗಳು ಒಗ್ಗೂಡಿ ಗದಗ ಜಿಲ್ಲೆಯ ಹೃದಯವನ್ನು ಮಾನವೀಯತೆಯಿಂದ ಬೆಳಗಿವೆ.
ಸರ್ಕಾರವೇ ಅಂಗಾಗದಾನ ಮಾಡಿದವರ ಮನೆಗೆ ಹೋಗಿ ಸನ್ಮಾನ ಮಾಡಿದ ಈ ಅಪರೂಪದ ಸಂದರ್ಭದಲ್ಲಿ ಎಂ.ಆರ್.ಪಾಟೀಲ, ಡಾ.ಎಸ್.ಆರ್.ನಾಗನೂರ, ಡಾ.ಪ್ಯಾರಾಅಲಿ ನೂರಾನಿ, ಡಾ.ಪ್ರಭು ಮಡಿವಾಳರ, ಡಾ.ವಿಶಾಲ ಕಪ್ಪನವರ, ಎಚ್.ಕೆ.ಪಾಟೀಲ ಸೇವಾ ತಂಡದ ಅಧ್ಯಕ್ಷ ಪ್ರಭು ಬುರಬುರೆ, ರಂಗಣ್ಣ ಓದುಗೌಡ್ರ, ಡಾ.ವೇಮನ ಸಾಹುಕಾರ, ಅಶೋಕ ಮಂದಾಲಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು, ವನ್ನಾಲ ಕುಟುಂಬದ ಸಾಮಾಜಿಕ ಪ್ರೀತಿಯನ್ನು, ಅದಕ್ಕಾಗಿ ಆ ಕುಟಂಬ ಮಾಡಿದ ತ್ಯಾಗವನ್ನು ಸ್ಮರಿಸಿದರು.
ಆಸ್ಪತ್ರೆಗೆ ಆಗಮಿಸಿ, ಮರಣದ ನಂತರ ಅಂಗಾಂಗ ದಾನ ಮಾಡಿ ಮತ್ತೊಬ್ಬರಿಗೆ ಬದುಕು ನೀಡಿದ್ದು, ಇದು ಇತರರಿಗೆ ಮಾದರಿಯಾದ ಕಾರ್ಯವಾಗಿದೆ. ಇದಕ್ಕೆ ಸ್ಪಂದಿಸಿದ ವನ್ನಾಲ ಕುಟುಂಬಸ್ಥರು ಸಮಾಜಕ್ಕೆ ಮಾದರಿಯಾಗಿದ್ದಾರೆ.
ನಾರಾಯಣ ವನ್ನಾಲ ಅವರು ನಾಲ್ಕು ಜನರಿಗೆ ಬದುಕು ನೀಡಿದ್ದಾರೆ ಎಂದ ಅವರು, ಕುಟುಂಬದವರ ಉದಾತ್ತ ನಿರ್ಧಾರವನ್ನು ಅಭಿನಂದಿನೀಯ. ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ವರ್ಗ ಹಾಗೂ ಅಧಿಕಾರಿಗಳ ನಿರಂತರ ಶ್ರಮದಿಂದ ಇದೆಲ್ಲಾ ಸಾಧ್ಯವಾಗಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲರ ಪ್ರೇರಣೆಯಿಂದ ಸಾಧ್ಯವಾಗಿದೆ ಎಂದು ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP