120 ಟನ್ ಕಬ್ಬು ಬೆಳೆದ ರೈತನ ತಾಂತ್ರಿಕ ಅಧ್ಯಯನಕ್ಕೆ ಬಂದ ಕಬ್ಬು ಸಂಸ್ಥೆ
ವಿಜಯಪುರ, 27 ನವೆಂಬರ್ (ಹಿ.ಸ.) : ಆ್ಯಂಕರ್ : ತಮ್ಮ ಕ್ಷೇತ್ರದಲ್ಲಿ ಹನಿ ನೀರಾವರಿ ಪದ್ಧತಿಯಲ್ಲಿ ಸಂಶೋಧನಾ ಹಂತದಲ್ಲಿರುವ ಕಬ್ಬು ಬೆಳೆದು, ಅಧಿಕ ಇಳುವರಿಯ ಸಾಧನೆ ಮಾಡಿರುವ ಮಾಜಿ ಸೈನಿಕ-ರೈತನನ್ನು ಸ್ವಯಂ ಕಬ್ಬು ಅಭಿವೃದ್ಧಿ, ಸಕ್ಕರೆ ಸಚಿವರೇ ಸನ್ಮಾನಿಸಿ, ಗೌರವಿಸಿ, ಪ್ರೋತ್ಸಾಹ ನೀಡಿದ್ದಾರೆ. ಬಸವ
ರೈತ


ವಿಜಯಪುರ, 27 ನವೆಂಬರ್ (ಹಿ.ಸ.) :

ಆ್ಯಂಕರ್ : ತಮ್ಮ ಕ್ಷೇತ್ರದಲ್ಲಿ ಹನಿ ನೀರಾವರಿ ಪದ್ಧತಿಯಲ್ಲಿ ಸಂಶೋಧನಾ ಹಂತದಲ್ಲಿರುವ ಕಬ್ಬು ಬೆಳೆದು, ಅಧಿಕ ಇಳುವರಿಯ ಸಾಧನೆ ಮಾಡಿರುವ ಮಾಜಿ ಸೈನಿಕ-ರೈತನನ್ನು ಸ್ವಯಂ ಕಬ್ಬು ಅಭಿವೃದ್ಧಿ, ಸಕ್ಕರೆ ಸಚಿವರೇ ಸನ್ಮಾನಿಸಿ, ಗೌರವಿಸಿ, ಪ್ರೋತ್ಸಾಹ ನೀಡಿದ್ದಾರೆ.

ಬಸವನಬಾಗೇವಾಡಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ಮಾಜಿ ಸೈನಿಕ ನಾರಾಯಣ ಸಾಳುಂಕೆ ಎಂಬವರು ಕೇವಲ ಮೂರು ವರ್ಷದಲ್ಲಿ ಕಬ್ಬು ಬೆಳೆಯಲ್ಲಿ ಅನುಕರಣೀಯ ಸಾಧನೆ ಮಾಡಿದ್ದಾರೆ.

ಇದನ್ನರಿತ ಕ್ಷೇತ್ರದ ಶಾಸಕರೂ ಆಗಿರುವ ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅವರು ಸಾಧನ ರೈತನನ್ನು ಸನ್ಮಾನಿಸುವ ಮೂಲಕ ರೈತಸೇನಾನಿಯ ಸಾಧನೆಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.

ಭಾರತೀಯ ಸೇನೆಯ ಮರಾಠಾ ರೆಜಿಮೆಂಟ ಸೇರಿ ಜಮ್ಮು ಕಾಶ್ಮೀರದಲ್ಲಿ 9 ವರ್ಷ, ಗುಜರಾತ್, ಅರುಣಾಚಲ ಪ್ರದೇಶ ಹಾಗೂ ರಾಷ್ಟ್ರ ರಾಜಧಾನಿ ನವದೆಹಲಿಯೂ ಸೇರಿದಂತೆ 17 ವರ್ಷ ದೇಶ ಸೇವೆ ಮಾಡಿ ನಿವೃತ್ತರಾಗಿದ್ದರು.

ಭಾರತ ಮಾತೆಯ ಸೇವೆಗೈದು ತವರಿಗೆ ಆಗಮಿಸಿದ ಸೇನಾನಿ ನಾರಾಯಣ ಅವರು ಭೂತಾಯಿ ಸೇವೆಗೆ ಅಣಿಯಾದರು. ಪರಿಣಾಮ ಪಿತ್ರಾರ್ಜಿತವಾಗಿ ಬಂದಿದ್ದ 11 ಎಕರೆ ಜಮೀನಿನಲ್ಲಿ ಸಾಂಪ್ರದಾಯಿಕ ಕೃಷಿಯಲ್ಲಿ ತೊಡಗಿದ್ದರು.

ಈ ಹಂತದಲ್ಲಿ ತಮ್ಮ ಸುತ್ತಲಿನ‌ ರೈತರು ಕಬ್ಬು ಬೆಳೆಯುವುದನ್ನು ಕಂಡು ತಾವೂ ಕಬ್ಬು ಬೆಳೆಯಲು ಮುಂದಾರು. ಆದರೆ ಸಾಮಾನ್ಯವಾಗಿ ಕಬ್ಬು ಬೆಳೆಯುವಲ್ಲಿ ರೈತರು ಮಾಡುತ್ತಿರುವ ತಪ್ಪುಗಳನ್ನು ಅಧ್ಯಯನ ಮಾಡಿ, ಸುಧಾರಿತ ತಾಂತ್ರಿಕತೆ ಅಳವಡಿಕೆಗೆ ಮುಂದಾದರು.

ತಮಗಿರುವ ಒಂದು ತೆರೆದ ಭಾವಿ, 4 ಕೊಳವೆಭಾವಿ ಜಲಮೂಲ ಬಳಸಿಕೊಂಡು, ತಮ್ಮದೇ ವಿಶಿಷ್ಟ ಜ್ಞಾನದಿಂದ ನೂತನ ತಾಂತ್ರಿಕತೆಯಿಂದ ಹನಿ ನೀರಾವರಿ ಪದ್ಧತಿ ಅಳವಡಿಕೊಂಡರು. ಸಂಶೋಧನಾ ಹಂತದಲ್ಲಿರುವ ಸಂಕೇಶ್ವರ ಮೂಲದ ಡಾ.ಸಂಜಯ ಪಾಟೀಲ ಅವರ ಬಳಿಯಿಂದ 25 ಸಾವಿರ ಸಸಿಗಳನ್ನು ತಂದು ನಾಟಿ ಮಾಡಿದರು. ಸಾಲಿನಿಂದ ಸಾಲಿಗೆ 7 ಅಡಿ, ಸಸಿಯಿಂದ ಸಸಿಗೆ 1 ಅಡಿ ಅಂತರದಲ್ಲಿ ನಾಟಿ ಮಾಡಿದರು.

ಬಳಿಕ ನಿಯಮಿತವಾಗಿ ಪ್ರತಿ ದಿನ 30 ಸಾವಿರ ಲೀಟರ್ ನೀರು ಪೂರೈಸಿದರು. ಪ್ರತಿ 10 ದಿನಕ್ಕೆ ಎಕರೆಗೆ 5 ಕೆಜಿಯಂತೆ 20 ಕೆಜಿ ಗೊಬ್ಬರ ಹಾಗೂ ಪ್ರತಿ 3 ತಿಂಗಳಿಗೆ ಒಮ್ಮೆ ನಿಗದಿತ ಪ್ರಮಾಣದಲ್ಲಿ ಲಘು ಪೋಷಕಾಂಶಗಳನ್ನು ಡ್ರಿಪ್ ಮೂಲಕವೇ ಪೂರೈಸಿದರು. ಇದರಿಂದ ಇತರೆ ರೈತರಿಗಿಂತ ಕಡಿಮೆ ಶ್ರಮ, ಮಿತ ನೀರು, ಕನಿಷ್ಟ ಪ್ರಮಾಣದ ಗೊಬ್ಬರ ಬಳಸುವ ತಂತ್ರಜ್ಞಾನದ ನಾರಾಯಣ ಅವರ ಪರಿಶ್ರಮ ಫಲ ನೀಡಿತು.

ಮೊದಲ ವರ್ಷ 107 ಟನ್, 2ನೇ ವರ್ಷ 112 ಟನ್ ಹಾಗೂ ಇದೀಗ 3 ನೇ ಬೆಳೆಯಾಗಿ 120 ಟನ್ ಇಳುವರಿ ಪಡೆದಿದ್ದಾರೆ.

ಇವರು ಬೆಳೆದಿರುವ ಕಬ್ನಿನ ತಳಿ ಪ್ರತಿ ಜಲ್ಲೆಯಲ್ಲೂ 7-10 ಮರಿಗಳು ಬರುತ್ತಿವೆ. ಪ್ರತಿ ಕಬ್ಬಿನ ಜಲ್ಲೆಯೂ ಸಾಮಾನ್ಯವಾಗಿ 20 ಅಡಿ ಎತ್ತರ ಬೆಳೆದಿದ್ದು, 28-35 ಗಣಿಕೆ ಹೊಂದಿವೆ. ಒಂದು ಕಬ್ಬಿನಲ್ಲಿ ಸರಾಸರಿ 3.5 ರಿಂದ 4 ಕೆಜಿ ತೂಕ ಬರುತ್ತಿದೆ. ಇತರೆ ರೈತರ ಜಮೀನಿನಲ್ಲಿ ಹಾಯಿ ನೀರಿನಲ್ಲಿ ಬೆಳೆದ ಕಬ್ಬಿಗಿಂತ ದುಪ್ಪಟ್ಟಿಗೂ ಹೆಚ್ಚಾಗಿ ತೂಕ ಬರುತ್ತಿದೆ.

ಇವರ ಸಾಧನೆ ಕಂಡು ಶ್ರೀಶಾಂತೇಶ್ವರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀಮಂತ ಇಂಡಿ ಅವರು ನಾರಾಯಣ ಅವರ ಮಾರ್ಗದರ್ಶನದಲ್ಲಿ 50 ಎಕರೆ ಕಬ್ಬು ಬೆಳೆದಿದ್ದಾರೆ. ಮೊದಲ ಕಟಾವಿನಲ್ಲೇ 140 ಟನ್ ಕಬ್ಬು ಇಳುವರಿ ಪಡೆದಿದ್ದಾರೆ.

ಸುತ್ತಲಿನ ರೈತರು ಸೇರಿದಂತೆ ಸುಮಾರು 200 ಎಕರೆ ಜಮೀನಿನಲ್ಲಿ ನಾರಾಯಣ ಅವರ ತಾಂತ್ರಿಕತೆ ಅನುಸರಿಸುತ್ತಿದ್ದಾರೆ.

ತಮ್ಮದೇ ಕ್ಷೇತ್ರ ವ್ಯಾಪ್ತಿಯ ಮಾಜಿ ಸೈನಿಕ ನಾರಾಯಣ ಸಾಳುಂಕೆ ಅವರು ಸಾಮಾನ್ಯ ಕಬ್ಬು ಬೆಳೆಗಾರರಿಗಿಂತ ಕಡಿಮೆ ವೆಚ್ಚದಲ್ಲಿ ದುಪ್ಪಟ್ಟು ಇಳುವರಿ ಕಬ್ಬು ಬೆಳೆದ ವಿಷಯ ಸ್ವಯಂ ಕಬ್ಬು ಅಭಿವೃದ್ಧಿ, ಸಕ್ಕರೆ, ಕೃಷಿ ಮಾರುಕಟ್ಟೆ ಸಹಿತ ಜವಳಿ ಖಾತೆ ಹೊಂದಿರುವ ಸಚಿವ ಶಿವಾನಂದ ಪಾಟೀಲ ಅವರನ್ನು ತಲುಪಿತು. ಕೂಡಲೇ ವಿಶಿಷ್ಟ ತಾಂತ್ರಿಕತೆಯಿಂದ ಅಧಿಕ ಇಳುವರಿಯ ಕಬ್ಬು ಬೆಳೆದ ಪ್ರಗತಿಪರ ರೈತ ನಾರಾಯಣ ಅವರನ್ನು ಕರೆಸಿ ಸನ್ಮಾನಿಸಿ, ಬೆನ್ನುತಟ್ಟಿದರು.

ಇಷ್ಟಕ್ಕೆ ಸುಮ್ಮನಾಗದ ಸಚಿವ ಶಿವಾನಂದ ಪಾಟೀಲ ಅವರು ಸಾಧಕ ರೈತನ ತಾಂತ್ರಿಕತೆ ಅರಿಯಲು ಕೃಷಿ ಇಲಾಖೆ ಹಾಗೂ ಎಸ್.ನಿಜಲಿಂಗಪ್ಪ ಕಬ್ಬು ಸಂಸ್ಥೆಯ ಸಂಶೋದಕರನ್ನು ರೈತನ ಕಬ್ಬಿನ ಗದ್ದೆಗೆ ಕಳಿಸಿ ಅಧ್ಯಯನ ನಡೆಸಲು ಸೂಚಿಸಿದರು.

ಸಚಿವರ ಸೂಚನೆಯಂತೆ ಗೊಳಸಂಗಿ ಗ್ರಾಮಕ್ಕೆ ಭೇಟಿ ನೀಡಿದ ಸಂಶೋಧಕರಾದ ಡಾ.ಆರ್.ಬಿ.ಸುತಗುಂಡಿ ನೇತೃತ್ವದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಹಿರಿಯ ವಿಜ್ಞಾನಿ ಡಾ.ಶಿವಶಂಕರಮೂರ್ತಿ, ಕೃಷಿ ಇಲಾಖೆಯ ಬಸವನಬಾಗೇವಾಡಿ ಕೃಷಿ ಸಹಾಯಕ ನಿರ್ದೇಶಕರಾದ ಎಂ.ಎಚ್.ಯರಝರಿ ಅವರಿದ್ದ ತಜ್ಞರ ತಂಡ ನಾರಾಯಣ ಅವರ ಕಬ್ಬಿನ ಬೆಳೆ ಪರಿಶೀಲಿಸಿ, ಮಾಹಿತಿ ಸಂಗ್ರಹಿದ್ದಾರೆ.

ಸದರಿ ಸಾಧಕ ರೈತ ಅಳವಡಿಸಿಕೊಂಡಿರುವ ವಿಶಿಷ್ಟ ತಾಂತ್ರಿಕತೆ, ನಿರ್ವಹಣೆ ಸೇರಿದಂತೆ ಸಮಗ್ರ ವರದಿ ಸಿದ್ಧಪಡಿಸಿ ಕಬ್ಬು ಅಭಿವೃದ್ಧಿ, ಸಕ್ಕರೆ ಸಚಿವಾಲಯಕ್ಕೆ ಸಲ್ಲಿಸಲು ಮುಂದಾಗಿದ್ದಾರೆ.

ಸಚಿವ ಶಿವಾನಂದ ಪಾಟೀಲ ಅವರು ರೈತರ ಬಗ್ಗೆ ಹೊಂದಿರುವ ಕಾಳಜಿ, ತನ್ನನ್ನು ಗುರುತಿಸಿ ಸನ್ಮಾನಿಸಿದ್ದಕ್ಕೆ ಮಾಜಿ ಸೈನಿಕ ನಾರಾಯಣ ಸಾಳುಂಕೆ ಸಂತಸಗೊಂಡಿದ್ದು, ತಮ್ಮನ್ನು ಗುರುತಿಸಿದ್ದಕ್ಕೆ ಮುಕ್ತವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande