


ಬಳ್ಳಾರಿ, 27 ನವೆಂಬರ್ (ಹಿ.ಸ.) :
ಆ್ಯಂಕರ್ : ನಗರದ ಬಸವ ಭವನ ಹತ್ತಿರದ ಹಿಂದುಳಿದ ವರ್ಗಗಳ ಬಾಲಕಿಯರ ವಸತಿ ನಿಲಯಕ್ಕೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಅವರು ಗುರುವಾರ ಭೇಟಿ ನೀಡಿ ವಸತಿ ನಿಲಯದಲ್ಲಿ ಕೊಠಡಿ, ಶೌಚಾಲಯ, ಉಗ್ರಾಣ ಕೊಠಡಿ, ಕುಡಿಯುವ ನೀರಿನ ಘಟಕ, ಅಡುಗೆ ಕೊಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ವಸತಿ ನಿಲಯದಲ್ಲಿ ಅಡುಗೆ ಬಳಸುವ ಕಳಪೆ ತರಕಾರಿ ಮತ್ತು ಆಹಾರ ಧಾನ್ಯ ಕಂಡು ವಾರ್ಡನ್ ವಿರುದ್ಧ ಅಸಮಾಧಾನ ವ್ಯಪಡಿಸಿದರು. ಮುಂದಿನ ದಿನಗಳಲ್ಲಿ ಗುಣಮಟ್ಟ ಕಾಪಾಡುವಂತೆ ಸೂಚನೆ ನೀಡಿದರು.
ವಿದ್ಯಾರ್ಥಿನಿಯರಿಗೆ ಏನಾದರೂ ಸಮಸ್ಯೆ ಇದ್ದಲ್ಲಿ ಹಾಗೂ ತೊಂದರೆ ಆದಲ್ಲಿ 1098 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಕಿವಿಮಾತು ಹೇಳಿದರು.
ಬಳಿಕ ನಗರದ ಹೊರವಲಯದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಗತ್ಯ ಸಲಹೆ-ಸೂಚನೆ ನೀಡಿದರು.
ನಂತರ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ, ದಿನನಿತ್ಯದ ಆಹಾರ ನೀಡುವ ವೇಳಾಪಟ್ಟಿ, ಕಾಲಕಾಲಕ್ಕೆ ಖೈದಿಗಳ ಆರೋಗ್ಯ ತಪಾಸಣೆ, ಅವರಿಗೆ ಒದಗಿಸಲಾದ ಕೆಲಸ ಕುರಿತು ಕಾರಾಗೃಹ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಕೇಂದ್ರ ಕಾರಾಗೃಹದ ಅಧೀಕ್ಷಕಿ ಲತಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ, ಜಿಲ್ಲಾ ನಿರೂಪಣಾಧಿಕಾರಿ ಸವಿತಾ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣ ಘಟಕದ ಅಧಿಕಾರಿಗಳು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್