
ಕೋಲಾರ, ೨೭ ನವೆಂಬರ್(ಹಿ.ಸ.) :
ಆ್ಯಂಕರ್ : ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ನಿಂದ ನಡೆಯುತ್ತಿರುವ ಸಾಮಾಜಿಕ ಕಾರ್ಯಗಳ ಜತೆಗೆ ಇದೀಗ ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಟ್ಯೂಷನ್ ಕ್ಲಾಸ್ಗೆ ಅವಕಾಶ ಕಲ್ಪಿಸಿರುವುದು ಶ್ಲಾಘನೀಯ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಎಂ.ಆರ್.ಗೋಪಾಲಕೃಷ್ಣ ತಿಳಿಸಿದರು.
ಶಾಲೆಯ ಆವರಣದಲ್ಲಿ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯ ವೇಮಗಲ್ ವ್ಯಾಪ್ತಿಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಟ್ಯೂಷನ್ ಕ್ಲಾಸ್ಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಈಗಾಗಲೇ ಶಾಲೆಗಳಿಗೆ ಜ್ಞಾನದೀಪ ಯೋಜನೆಯಡಿ ಶಿಕ್ಷಕರನ್ನು ನೀಡಿದೆ, ಇದೀಗ ಸರ್ಕಾರಿ ಶಾಲೆಗಳ ಮಕ್ಕಳಿಗೆ ಶಿಕ್ಷಕರು ವಿಶೇಷ ತರಗತಿ ನಡೆಸುವುದರ ಜತೆಗೆ ಟ್ಯೂಷನ್ ಕ್ಲಾಸ್ ಗೂ ಅವಕಾಶ ಕಲ್ಪಿಸಿರುವ ಮಾತೃಶ್ರೀ ಹೇಮಾವತಿ ಹೆಗಡೆ ಹಾಗೂ ವೀರೇಂದ್ರ ಹೆಗಡೆಯವರು ಹಾಗೂ ಮಂಜುನಾಥಸ್ವಾಮಿಯ ಆಶೀರ್ವಾದ ಈ ಮಕ್ಕಳಿಗೆ ಸಿಕ್ಕಂತಾಗಿದ್ದು, ಇದನ್ನು ಸದುಪಯೋಗಪಡಿಸಿಕೊಂಡು ಉತ್ತಮ ಅಂಕಗಳಿಸಿ ಎಂದು ಹಾರೈಸಿದರು.
ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಶಶಿಕುಮಾರ್ ಮಾತನಾಡಿ, ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳು ಹಾಗೂ ಮಾತೃಶ್ರೀ ಹೇಮಾವತಿ ಹೆಗಡೆಯವರ ಆಶಯದಂತೆ ಈ ಕಾರ್ಯ ನಡೆಯುತ್ತಿದ್ದು, ಗ್ರಾಮೀಣ ಮಕ್ಕಳ ನೆರವಿಗೆ ಯೋಜನೆ ಮುಂದಾಗಿದೆ ಎಂದರು.
ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಾಗಿ, ಗುಣಮಟ್ಟದ ಶಿಕ್ಷಣದ ಜತೆಗೆ ಸಂಸ್ಕಾರ,ಮೌಲ್ಯಗಳನ್ನು ಬೆಳೆಸಿಕೊಳ್ಳಿ ಎಂದ ಅವರು, ಧರ್ಮಸ್ಥಳ ಯೋಜನೆಯಿಂದ ಜಿಲ್ಲೆಯಲ್ಲಿ ಅನೇಕ ಸಾಮಾಜಿಕ ಕಾರ್ಯಗಳು ನಡೆಯುತ್ತಿವೆ ಎಂದರು.
ಜಿಲ್ಲೆ ಜೀವನಾಡಿಗಳಾದ ಕೆರೆಗಳ ಪುನಶ್ಚೇತನಕ್ಕೆ ಆದ್ಯತೆ ನೀಡಿ ಪುನಶ್ಚೇತನದ ಕೆಲಸ ಮಡಲಾಗುತ್ತಿದೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಮಾಜಿಕ ಕಾರ್ಯಗಳಲ್ಲಿ ಸಿಂಹ ಪಾಲು ಕೋಲಾರ ಜಿಲ್ಲೆಗೆ ಸಿಕ್ಕಿದ್ದು, ಇಂತಹ ಕಾರ್ಯಕ್ಕೆ ನೆರವಾಗಿರುವ ಪೂಜ್ಯ ಹೆಗಡೆಯವರು ಗ್ರಾಮೀಣ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಕೋಟ್ಯಾಂತರ ರೂ ಸಾಲದ ನೆರವು ಒದಗಿಸುವ ಮೂಲಕ ಮಹಿಳಾ ಸ್ವಾವಲಂಬನೆಗೆ ಯೋಜನೆ ಒತ್ತು ನೀಡಿದೆ ಎಂದ ಅವರು, ಕೆರೆಗಳ ತವರಾದ ಕೋಲಾರ ಜಿಲ್ಲೆಯಲ್ಲಿ ಕೆರೆಗಳ ಪುನಶ್ಚೇತನಕ್ಕೂ ಹೆಚ್ಚಿನ ನೆರವು ಒದಗಿಸಲಾಗಿದ್ದು, ಅನೇಕ ಕೆರೆಗಳ ಪುನರುಜ್ಜೀವನ ಮಾಡಲಾಗಿದೆ ಎಂದು ತಿಳಿಸಿದರು.
ವೇಮಗಲ್ ಯೋಜನಾಧಿಕಾರಿ ರಘು ಮಾತನಾಡಿ, ಧರ್ಮಸ್ಥಳ ಯೋಜನೆಯಿಂದ ದೇವಾಲಯಗಳ ಅಭಿವೃದ್ದಿಗೆ ನೆರವು, ಸಂಕಷ್ಟದಲ್ಲಿರುವ ಅನಾಥರಿಗೆ, ವಿಕಲಚೇತನರಿಗೆ ಮಾಸಿಕ ವೇತನ ನೀಡಿಕೆ, ಶಾಲೆಗಳಿಗೆ ಶಿಕ್ಷಕರ ನೇಮಕಕ್ಕೆ ಗೌರವಧನ ನೀಡಿಕೆ, ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ನೆರವು, ಶಾಲೆಗಳಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ನೆರವು, ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ಮಾಣ ಹೀಗೆ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರಲಾಗಿದೆ ಎಂದರು.
ತಾಲ್ಲೂಕಿನಲ್ಲಿ ಎಷ್ಟೇ ಸರ್ಕಾರಿ ಪ್ರೌಢಶಾಲೆಗಳಿದ್ದರೂ ಅರಾಭಿಕೊತ್ತನೂರು ಶಾಲೆಯನ್ನು ಆಯ್ಕೆ ಮಾಡಿಕೊಳ್ಳಲಾಗಿರುವುದು, ಈ ಮಕ್ಕಳು ಸುದೈವ, ಈ ಮಕ್ಕಳಿಗೆ ಧರ್ಮಸ್ಥಳ ಮಂಜುನಾಥಸ್ವಾಮಿಯ ಆಶೀರ್ವಾದ ಸಿಕ್ಕಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ನಾರಾಯಣ ಶೆಟ್ಟಿ, ಸಮನ್ವಯಾಧಿಕಾರಿ ಶಿಲ್ಪ, ಮೇಲ್ವಿಚಾರಕರಾದ ಉಷಾ, ಸೇವಾ ಪ್ರತಿನಿಧಿ ವನಜಾಕ್ಷಿ, ಶಾಲೆಯ ಶಿಕ್ಷಕರಾದ ಸಿದ್ದೇಶ್ವರಿ, ಭವಾನಿ,ವೆಂಕಟರೆಡ್ಡಿ, ಶ್ವೇತಾ, ಕೆ.ಲೀಲಾ, ಶ್ರೀನಿವಾಸಲು, ರಮಾದೇವಿ, ಚೈತ್ರಾ ಮತ್ತಿತರರಿದ್ದರು.
ಚಿತ್ರ : ಕೋಲಾರ ತಾಲ್ಲೂಕಿ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಶಾಲೆಯ ಆವರಣದಲ್ಲಿ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯ ವೇಮಗಲ್ ವ್ಯಾಪ್ತಿಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಟ್ಯೂಷನ್ ಕ್ಲಾಸ್ಗೆ ಚಾಲನೆ ನೀಡಿಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್