
ಗದಗ, 27 ನವೆಂಬರ್ (ಹಿ.ಸ.) :
ಆ್ಯಂಕರ್ : ನರೇಗಾ ಯೋಜನೆಯಲ್ಲಿ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಜೊತೆಗೆ ಶಾಲೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಕಡ್ಡಾಯವಾಗಿ ಕ್ರಿಯಾಯೋಜನೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಾರ್ಯನಿರ್ವಾಹಕ ಅಧಿಕಾರಿಗಳಾದ ಚಂದ್ರಶೇಖರ ಬಿ. ಕಂದಕೂರ ಹೇಳಿದರು.
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಕುಂಟೋಜಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಣಚಮಟ್ಟಿ ಗ್ರಾಮದಲ್ಲಿ 2026-27ನೇ ಸಾಲಿನ ನರೇಗಾ ಕ್ರಿಯಾ ಯೋಜನೆ ತಯಾರಿಸುವ ಕುರಿತು ಗುರುವಾರ ನಡೆದ ಗ್ರಾಮ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಾಬ್ ಕಾರ್ಡ್ ಹೊಂದಿರುವ ಕೂಲಿಕಾರರು ತಮ್ಮ ಜೀವಿತಾವಧಿಯಲ್ಲಿ 5 ಲಕ್ಷ ರೂಪಾಯಿ ವರೆಗೂ ವೈಯಕ್ತಿಕ ಸೌಲಭ್ಯಗಳನ್ನು ಪಡೆಯಬಹುದು. ಅದರಲ್ಲಿ ಕೃಷಿ ಹೊಂಡ, ಎರೆಹುಳು ಘಟಕ, ಕೊಳವೆ ಭಾವಿ ಮರುಪೂರಣ ಘಟಕ, ಮೇಕೆ ಶೆಡ್, ದನದ ದೊಡ್ಡಿ, ತೋಟಗಾರಿಕೆ ಇಲಾಖೆಯಲ್ಲಿ ಪಪ್ಪಾಯಿ ಮತ್ತು ಬಾಳೆ ಹೊರತು ಪಡಿಸಿ ಉಳಿದಂತೆ ಮಾವು, ಕರಿಭೇವು, ಸೀಭೆ, ನುಗ್ಗೆ, ತೆಂಗು, ಸೀತಾಫಲ ಸೇರಿದಂತೆ ದೀರ್ಘಕಾಲಿಕ ಬೆಳೆಗಳನ್ನು ನರೇಗಾದಲ್ಲಿ ಮಾಡಿಕೊಳ್ಳಲು ಅವಕಾಶವಿದೆ ಇಂತಹ ಕಾಮಗಾರಿಗಳನ್ನು ಕ್ರಿಯಾ ಯೋಜನೆಯಲ್ಲಿ ಸೇರಿಸಿಕೊಳ್ಳಬಹುದು. ಆಸಕ್ತ ರೈತರು ಕ್ರಿಯಾ ಯೋಜನೆಯಲ್ಲಿ ಹೆಸರನ್ನು ಅಳವಡಿಸಿಕೊಂಡು ನಂತರ ಕೆಲಸ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸಮುದಾಯ ಕಾಮಗಾರಿಗಳಾದ ಸಿಸಿ ರಸ್ತೆ, ಚರಂಡಿ, ಕೆರೆ ಅಭಿವೃದ್ಧಿ, ಸ್ಮಶಾನ ಅಭಿವೃದ್ಧಿ, ಮಳೆ ನೀರು ಕೊಯ್ಲು, ಎನ್.ಆರ್.ಎಲ್.ಎಂ. ಶೆಡ್ ನಿರ್ಮಾಣ ಸೇರಿದಂತೆ ಇತರೆ ಕಾಮಗಾರಿಗಳನ್ನು ಮಾಡಿಕೊಳ್ಳಲು ನರೇಗಾದಲ್ಲಿ ಅವಕಾಶವಿದ್ದು, ಯಾವ ಗ್ರಾಮಕ್ಕೆ ಯಾವ ಕಾಮಗಾರಿಗಳು ಅವಶ್ಯಕವಾಗಿವೆ ಅಂತಹವುಗಳನ್ನು ಆದ್ಯತೆಯ ಮೇರೆಗೆ ಕ್ರಿಯಾಯೋಜನೆಯಲ್ಲಿ ಅಳವಡಿಸಲು ಸೂಚಿಸಿದರು.
ಶಾಲೆ ಅಭಿವೃದ್ಧಿಗೆ ಮೊದಲ ಆದ್ಯತೆ, ನರೇಗಾ ಯೋಜನೆಯಡಿ ಶಾಲೆಗೆ ಬೇಕಾಗುವಂತ ಶೌಚಾಲಯ, ಅಡುಗೆ ಕೋಣೆ, ಕಂಪೌಂಡ್, ಆಟದ ಮೈದಾನಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಪ್ರತಿ ಶಾಲೆಗಳಲ್ಲಿ ಶೌಚಾಲಯ, ಅಡುಗೆ ಕೋಣೆ, ಕಂಪೌಂಡ್, ಆಟದ ಮೈದಾನ ಪರಿಶೀಲಿಸಿ, ಯಾವ ಶಾಲೆಗೆ ಯಾವುದು ಅವಶ್ಯಕವಾಗಿದೆ ಅವುಗಳನ್ನು ಕಡ್ಡಾಯವಾಗಿ ಹೆಸರನ್ನು ಸೇರಿಸಿ ಕ್ರಿಯಾ ಯೋಜನೆಯಲ್ಲಿ ತಯಾರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂನಾಬಾಯಿ ರಾಠೋಡ, ಸದಸ್ಯರಾದ ಲಿಂಬಣ್ಣ ಗಡಾದ, ದೊಡ್ಡಮ್ಮ ಅಗಸಿಮನಿ, ಲಕ್ಷ್ಮವ್ವ ಕೌಡಕಿ, ಶೇಖಪ್ಪ ಪೂಜಾರ, ದುರಗಪ್ಪ ಕೋತಬಾಳ, ಪರಪ್ಪ ತೊಂಡಿಹಾಳ, ಸಂಗಪ್ಪ ಪೂಜಾರ, ರೇಷ್ಮೇ ಇಲಾಖೆ ಸುರೇಶ ಡಾಣಕ, ತೋಟಗಾರಿಕೆ ಇಲಾಖೆಯ ಮಹಾಂತೇಶ ಆಂಟಿನ್, ಇತರೆ ಇಲಾಖೆ ಅಧಿಕಾರಿಗಳು, ನರೇಗಾ ಹಾಗೂ ಪಂಚಾಯತ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಹಾಜರಿದ್ದರು.
ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಮಂಜುನಾಥ ಮೇಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP