
ಬೆಂಗಳೂರು, 27 ನವೆಂಬರ್ (ಹಿ.ಸ.) :
ಆ್ಯಂಕರ್ : ಮುಂಗಾರು ಅವಧಿಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉಂಟಾದ ಭಾರಿ ಮಳೆ ಹಾಗೂ ಪ್ರವಾಹದಿಂದ ಬೆಳೆಹಾನಿಗೊಳಗಾದ ರೈತರಿಗೆ ಹೆಚ್ಚುವರಿ ನೆರವು ನೀಡಲು ರಾಜ್ಯ ಸರ್ಕಾರ ಘೋಷಿಸಿರುವ ರೂ. 1033.60 ಕೋಟಿ ವಿಶೇಷ ಪ್ಯಾಕೇಜ್ ವಿತರಣೆಗೆ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಚಾಲನೆ ದೊರಕಿತು.
ಒಟ್ಟು 14.24 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ಹೆಚ್ಚುವರಿ ಪರಿಹಾರ ಜಮಾ ಮಾಡುವ ಪ್ರಕ್ರಿಯೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಟನ್ ಒತ್ತುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು,
“ರೈತರ ಸಂಕಷ್ಟಕ್ಕೆ ಸ್ಪಂದಿಸುವುದು ಸರ್ಕಾರದ ಪ್ರಥಮ ಕರ್ತವ್ಯ. ಅತಿವೃಷ್ಟಿಯಿಂದ ಅಪಾರ ನಷ್ಟ ಅನುಭವಿಸಿದ ರೈತರಿಗೆ ಸಾಧ್ಯವಾದಷ್ಟು ಹೆಚ್ಚುವರಿ ನೆರವು ನೀಡುತ್ತಿದ್ದೇವೆ. ಇನ್ಪುಟ್ ಸಬ್ಸಿಡಿ ದರಗಳನ್ನು ಕೂಡ ರೈತರ ಹಿತದೃಷ್ಟಿಯಿಂದ ಗಣನೀಯವಾಗಿ ಹೆಚ್ಚಿಸಲಾಗಿದೆ,” ಎಂದು ಹೇಳಿದರು.
ಮುಂಗಾರು ಅವಧಿಯಲ್ಲಿ 82.56 ಲಕ್ಷ ಹೆಕ್ಟೇರ್ ಬೆಳೆ ಬಿತ್ತನೆ ನಡೆದಿದ್ದರೂ 14.58 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅತಿವೃಷ್ಟಿ ಬೆಳೆಹಾನಿ ಸಂಭವಿಸಿದ್ದು, ಸುಮಾರು ರೂ. 10,748 ಕೋಟಿ ನಷ್ಟ ಅಂದಾಜಿಸಲಾಗಿದೆ. ಧಾರವಾಡ, ಗದಗ, ಹಾವೇರಿ ಸೇರಿದಂತೆ ಒಂಭತ್ತು ಜಿಲ್ಲೆಗಳು ಹೆಚ್ಚು ಹಾನಿಗೊಳಗಾದವು. ತೊಗರಿ, ಹೆಸರು, ಹತ್ತಿ, ಮೆಕ್ಕೆಜೋಳ ಬೆಳೆಗಳಿಗೆ ಹೆಚ್ಚಿನ ನಷ್ಟ ಉಂಟಾಗಿದೆ.
ಈಗಾಗಲೇ SDRF ಮಾನದಂಡದ ಪ್ರಕಾರ ರೂ. 1218.03 ಕೋಟಿ ರೈತರ ಖಾತೆಗಳಿಗೆ ಜಮಾ ಮಾಡಲಾಗಿದ್ದು, ಅದರ ಜೊತೆಗೆ ರಾಜ್ಯ ನಿಧಿಯಿಂದ ರೂ. 1033.60 ಕೋಟಿ ಟಾಪ್-ಅಪ್ ರೂಪದಲ್ಲಿ ಬಿಡುಗಡೆಗೊಂಡಿದೆ. ಒಟ್ಟು ರೂ. 2251.63 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾಗಲಿದೆ.
ಬೆಳೆಹಾನಿ ಪರಿಶೀಲನೆಗೆ ಕೇಂದ್ರ ತಂಡ ರಾಜ್ಯಕ್ಕೆ ಆಗಮಿಸಲಿದೆ. ಪ್ರಧಾನಮಂತ್ರಿಯನ್ನು ಭೇಟಿ ಮಾಡಿ ಪರಿಹಾರ ಬಿಡುಗಡೆಗೆ ಮನವಿ ಸಲ್ಲಿಸಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa