
ಗದಗ, 27 ನವೆಂಬರ್ (ಹಿ.ಸ.) :
ಆ್ಯಂಕರ್ : ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕಾಗಿ ರೈತ ಸಂಘಟನೆಗಳು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ 12 ನೇ ದಿನ ಪೂರೈಸಿದ್ದು, 12ನೇ ದಿನದಂದು ನಾವೆಲ್ಲರೂ ಗೋವಿನಜೋಳ ಬೆಳೆದು ಹಾನಿಗೊಳಗಾಗಿದ್ದೇವೆ ಎಂದು ತಮ್ಮ ತಮ್ಮ ಪಹಣಿ ಪತ್ರಿಕೆ ಉತಾರ ಪ್ರದರ್ಶಿಸುವ ಮೂಲಕ ರಸ್ತೆಯಲ್ಲಿ ನಿಂತು ಮತ್ತೊಂದು ರೀತಿ ಪ್ರತಿಭಟನೆ ನಡೆಸಿ ಸರಕಾರದ ಗಮನ ಸೆಳೆಯಲು ಪ್ರಯತ್ನಿಸಿದರು.
ಈ ವೇಳೆ ಮಾತನಾಡಿದ ಪುರಸಭೆ ಮಾಜಿ ಉಪಾಧ್ಯಕ್ಷ ಹಾಗೂ ಮುಸ್ಲಿಂ ಸಮಾಜದ ಮುಖಂಡ ದಾದಾಪೀರ ಮುಚ್ಚಾಲೆ, ಹಸಿರು ಸೇನೆ ಅಧ್ಯಕ್ಷ ಜಾಯನಗೌಡ ಮಾತನಾಡಿ, ರೈತರು ಈ ದೇಶದ ಸಂಪತ್ತು, ಅತಿವೃಷ್ಟಿ, ಅನಾವೃಷ್ಟಿ, ರೋಗಬಾಧೆ. ಬೆಲೆ ಕುಸಿತ ಹೀಗೆ ಹತ್ತಾರು ಸಮಸ್ಯೆಗಳ ನಡುವೆ ಬೆವರು ಸುರಿಸಿ ದುಡಿಯುವ ರೈತರ ಬೆನ್ನಿಗೆ ಸರ್ಕಾರ ನಿಲ್ಲಬೇಕು. ರೈತರ ಹೋರಾಟಕ್ಕೆ ಸ್ಪಂದಿಸಲಾಗಿದೆ ಎಂದು ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸುವ ಆಶ್ವಾಸನೆ ಹಾಗೆಯೇ ಉಳಿಯಬಾರದು. ಕೂಡಲೇ ಹಾಳಾಗುತ್ತಿರುವ ಗೋವಿನಜೋಳವನ್ನು ಖರೀದಿಸಿ ರೈತರಿಗೆ ಅನೂಕೂಲ ಮಾಡಿಕೊಡಬೇಕು. ರೈತರ ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದರು.
ನಮ್ಮ ನಡುವೆ ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿ ಜನರ ನೋವಿಗೆ ಸ್ಪಂದಿಸುತ್ತಿದ್ದ ಹಾಗೂ ರೈತರ ಮತ್ತು ಬಡವರ ಪಾಲಿಗೆ ದಾರಿದೀಪವಾಗಿದ್ದ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರ ಆಕಾಲಿಕ ಸಾವು ಇಡೀ ನಾಡಿಗೆ ಬರಸಿಡಿಲಿನಂತೆ
ಬಂದೆರಗಿದೆ. ಇಂತಹ ವ್ಯಕ್ತಿಯನ್ನು ಕಳೆದುಕೊಂಡ ಆ ಕುಟುಂಬದ ನೋವಿನಲ್ಲಿ ರೈತ ಸಮುದಾಯವಿದೆ. ಭಗವಂತ ಅವರ ಅಗಲುವಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಕುಟುಂಬಕ್ಕೆ ನೀಡಲಿ ಎಂದು ಪ್ರತಿಭಟನಾಕಾರರು ಪ್ರಾರ್ಥಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರ ನಿಧನಕ್ಕೆ ರೈತರು ಶ್ರದ್ಧಾಂಜಲಿ ಸಲ್ಲಿಸಿದರು.
ಹೋರಾಟದ ನೇತೃತ್ವ ವಹಿಸಿರುವ ಮಂಜುನಾಥ ಮಾಗಡಿ, ಎಂ ಎಂ ದೊಡ್ಡಗೌಡರ, ಹೊನ್ನಪ್ಪ ವಡ್ಡರ, ನಾಗರಾಜ ಚಿಂಚಲಿ, ನೀಲಪ್ಪ ಶರಸೂರಿ ಮಾತನಾಡಿ, ನ್ಯಾಯಯುತ ಬೇಡಿಕೆಗಾಗಿ ಕಳೆದ 12 ದಿನಗಳಿಂದ ರೈತರು ಶಾಂತಿ, ಸಮಾಧಾನದಿಂದ ವಿನೂತನ ರೀತಿಯಿಂದ ಹೋರಾಟ ಮಾಡುತ್ತಿದ್ದೇವೆ.
ಕಳೆದ 6 ದಿನಗಳ ಹಿಂದೆ ಸರಕಾರ ಬೆಂಬಲ ಬೆಲೆ ಕೇಂದ್ರ ಪ್ರಾರಂಭಿಸುವ ಭರವಸೆ ನೀಡಿದ್ದರಿಂದ ರೈತರಿಗೆ ನೆಮ್ಮದಿಯಾಗಿದೆ. ಆದರೆ ಇದು ಮೂಗಿಗೆ ತುಪ್ಪ ಒರೆಸುವ ಕಾರ್ಯವಾಗಬಾರದು. ರೈತರ ಒಕ್ಕೊರಲಿನ ಕೂಗು, ಹೋರಾಟಕ್ಕೆ 2/3 ದಿನಗಳಲ್ಲಿ ಸ್ಪಂದಿಸದಿದ್ದರೆ ಹೋರಾಟದ ಸ್ವರೂಪ ಮತ್ತೆ ತೀವ್ರತೆ ಪಡೆದುಕೊಳ್ಳಲಿದೆ ಎಂದರು.
ಹೋರಾಟದಲ್ಲಿ ಎಂ.ಎಂ. ಗದಗ, ಪ್ರಕಾಶ ಅಂಗಡಿ, ಕೃಷ್ಣಪ್ಪ ಲಮಾಣಿ, ಶರಣು ಗೋಡಿ, ಮಲ್ಲೇಶ ಅಂಕಲಿ, ಪರಮೇಶ ಹಂಗನಕಟ್ಟಿ, ಶಿವಪುತ್ರಪ್ಪ ತಾರಿಕೊಪ್ಪ, ಬಸವರಾಜ ಹಿರೇಮನಿ ಸೇರಿದಂತೆ ಅನೇಕರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP