
ವಿಜಯಪುರ, 27 ನವೆಂಬರ್ (ಹಿ.ಸ.) :
ಆ್ಯಂಕರ್ : ಸಮಾಜದಲ್ಲಿ ನಾವೆಲ್ಲರೂ ಸಮಾನರು, ತಾರತಮ್ಯ ಬೇಧ-ಭಾವ ತೊರೆದು ಎಲ್ಲರೂ ಸಮಾನರೆಂಬುದು ಸಂವಿಧಾನ ತಿಳಿಸುತ್ತದೆ. ನಮ್ಮ ಸಂವಿಧಾನದ ಆಶಯಗಳಿಗನುಗುಣವಾಗಿ ನಡೆಯೋಣ ಎಂದು ಧಾರವಾಡದ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ್ವರ ಬಬಲೇಶ್ಚರ ಅವರು ಹೇಳಿದರು.
ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹಾಗೂ ಭಾರತದ ಸಂವಿಧಾನ ಪ್ರಸ್ತಾವನೆಗೆ ಪುಷ್ಪಾರ್ಚನೆ ಮಾಡಿ, ಅವರು ಮಾತನಾಡಿದರು.
ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನವು ಬಡವರ, ಮಹಿಳೆಯರ ಶೋಷಿತರ ಧ್ವನಿಯಾಗಿದೆ. ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿ, ಸರ್ವರಿಗೂ ಸಮಾನತೆ ಒದಗಿಸಿದೆ. ನಾವೆಲ್ಲರೂ ಘನತೆ ಗೌರವದಿಂದ ಬದುಕುವ ಹಕ್ಕನ್ನು ಕಲ್ಪಿಸಿ, ಎಲ್ಲರ ಬಾಳಿನ ಬೆಳಕಾಗಿದೆ. ನಮ್ಮ ಸಂವಿಧಾನದ ಆಶಯಗಳ ಕುರಿತು ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕು ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ಮಾತನಾಡಿ, ನಮ್ಮ ಸಂವಿಧಾನ ಇಡೀ ವಿಶ್ವದಲ್ಲಿಯೇ ದೊಡ್ಡ ಸಂವಿಧಾನವಾಗಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ ರಚಿತ ಸಂವಿಧಾನ ಎಲ್ಲರ ಸದಾಶಯ ಹೊಂದಿದ ಬದುಕಿನ ದಾಖಲೆಯಾಗಿದೆ. ಜಾರಿಗೊಳಿಸುವ ಯಾವುದೇ ಕಾನೂನುಗಳು ಸಂವಿಧಾನದ ಆಶಯಗಳಿಗನುಗುಣವಾಗಿ ರೂಪುಗೊಳ್ಳುತ್ತವೆ. ಸಂವಿಧಾನದ ಪ್ರಸ್ತಾವನೆಯಲ್ಲಿ ಗೌರವದಿಂದ ಬದುಕಲು ಎಲ್ಲರಿಗೂ ಕಾನೂನುಬದ್ಧವಾಗಿ ಹೇಳಲು ಅವಕಾಶ ನೀಡಿದೆ. ಅವಕಾಶಗಳ ಸಮಾನತೆಯನ್ನು ತಂದುಕೊಟ್ಟಿದೆ ಎಂದು ಅವರು ಹೇಳಿದರು.
ಸಂವಿಧಾನದ ಪ್ರಸ್ತಾವನೆಯಲ್ಲಿ ಪ್ರತಿಯೊಂದು ಅಂಶಗಳು ಒಳಗೊಂಡಿದ್ದು, ಅನೇಕ ಸಮಸ್ಯೆಗಳಿಗೆ ಪರಿಹಾರಾತ್ಮಕವಾಗಿ ಸಲಹೆಗಳನ್ನು ಸಂವಿಧಾನ ನೀಡುತ್ತದೆ ಮೂಲಭೂತ ಹಕ್ಕುಗಳನ್ನು ನೀಡಿದ ಸಂವಿಧಾನವು ಜವಾಬ್ದಾರಿಯುತ ನಾಗರಿಕರಾಗಿ ನಿರ್ವಹಿಸವೇಕಾದ ಕರ್ತವ್ಯಗಳ ಬಗ್ಗೆಯೂ ತಿಳಿಸಿದೆ. ನಾವೆಲ್ಲರೂ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯೋಣ ಎಂದು ಅವರು ಹೇಳಿದರು.
ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮಾತನಾಡಿ, ಸಂವಿಧಾನ ಈ ನೆಲದ ಕಾನೂನಾಗಿದೆ. ಅದು ಶ್ರೇಷ್ಠ ಪುಸ್ತಕ. ನಮ್ಮೆಲ್ಲರನ್ನೂ ಒಂದುಗೂಡಿಸಿದ್ದು, ಡಾ.ಬಿ.ಆರ್. ಅಂಬೇಡ್ಕರ ರಚಿಸಿರುವ ಸಂವಿಧಾನವಾಗಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಕುರಿತು ತಿಳಿಸುತ್ತದೆ ಎಂದು ಹೇಳಿದರು.
ಹೈಕೋರ್ಟ್ ನ್ಯಾಯವಾದಿ ಶ್ರೀಮತಿ ರಾಜಲಕ್ಷಿö್ಮ ಅಂಕಲಗಿ ಉಪನ್ಯಾಸ ನೀಡಿದ ಅವರು ಸಂವಿಧಾನದ ಕುರಿತು ವಿಸೃತವಾಗಿ ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವು ದೇಶದ ಕಟ್ಟಕಡೆಯ ವ್ಯಕ್ತಿಯೂ ಘನತೆಯಿಂದ ಬದುಕುವ ಅವಕಾಶ ಕಲ್ಪಿಸಿಕೊಟ್ಟಿದೆ. ಮಹಿಳೆಯರಿಗೆ ಸಮಾನತೆ ತಂದುಕೊಟ್ಟಿದೆ. ಬೇರೆ ಬೇರೆ ದೇಶಗಳ ಸಂವಿಧಾನದ ಕೆಲ ಭಾಗಗಳನ್ನು ಎರವಲು ಪಡೆದಿರುವ ನಮ್ಮ ಸಂವಿಧಾನ ಎಲ್ಲರ ಆಶಯಗಳನುಗುಣವಾಗಿದೆ. ಇದನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ಪ್ರಮಾಣಪತ್ರ ವಿತರಣೆ : ಸಂವಿಧಾನ ದಿನಾಚರಣೆ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ರಸಪ್ರಶ್ನೆ, ಪ್ರಬಂಧ ಸ್ಪರ್ಧೆ, ಚರ್ಚಾಸ್ಪರ್ಧೆ, ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ,ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ, ಪಾಲಿಕೆಯ ಉಪ ಆಯುಕ್ತ ಮಹಾವೀರ ಬೊರಣ್ಣವರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಕೆ.ಹೊಸಮನಿ, ನೌಕರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೇಡಶ್ಯಾಳ, ಕಾರ್ಮಿಕ ಇಲಾಖೆಯ ಅಧಿಕಾರಿ ಉಮಾಶ್ರೀ ಕೋಳಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಪುಂಡಲಿಕ ಮಾನವರ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಯ ಪದಾಧಿಕಾರಿಗಳು, ವಸತಿ ನಿಲಯಗಳ ವಾರ್ಡ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮೆರವಣಿಗೆ : ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಸಂವಿಧಾನ ಜಾಗೃತಿ ಜಾಥಾಕ್ಕೆ ಚಾಲನೆ ದೊರೆತು, ಜಾನಪದ ಕಲಾ ಮೇಳಗಳೊಂದಿಗೆ ಸಾಗಿದ ಭವ್ಯ ಮೆರವಣಿಗೆಯು ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಸಮಾವೇಶಗೊಂಡಿತು.
ಹಿಂದೂಸ್ತಾನ್ ಸಮಾಚಾರ್ / jyothi deshpande