
ಗದಗ, 27 ನವೆಂಬರ್ (ಹಿ.ಸ.) :
ಆ್ಯಂಕರ್ : ಜೀವನ ಶೈಲಿ, ಒತ್ತಡ, ಆಹಾರ ಪದ್ಧತಿ, ದುರಾಸೆ, ಮಾಲಿನ್ಯಯುತ ಪರಿಸರ ಮತ್ತು ತಿನ್ನುವ ಆಹಾರದಲ್ಲಿರುವ ವಿಷದ ಅಂಶಗಳು, ದುಶ್ಚಟಗಳು, ಹೃದಯ ಸಮಸ್ಯೆಗೆ ಕಾರಣವಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಎಸ್‌ಡಿಎಮ್ ನಾರಾಯಣ ಹಾರ್ಟ್ ಸೆಂಟರ್‌ನ ಹೃದಯ ರೋಗ ತಜ್ಞ ಡಾ. ಮುರಳೀಧರ ನಾಯ್ಕ ತಿಳಿಸಿದರು.
ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಬಾಲಾಜಿ ಆಸ್ಪತ್ರೆಯಲ್ಲಿ ಎಸ್‌ಡಿಎಮ್ ನಾರಾಯಣ ಹಾರ್ಟ್ ಸೆಂಟರ್. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಶಿರಹಟ್ಟಿ ಹಾಗೂ ಲಕ್ಷೇಶ್ವರ ತಾಲೂಕು, ಕರ್ನಾಟಕ ರಾಜ್ಯ ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಸಂಘ, ಕರ್ನಾಟಕ ಗ್ರಾಮಣಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸೇವಾ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ 78ನೇ ಜನ್ಮದಿನ ಹಾಗೂ ಹಿರಿಯ ನಾಗರಿಕರ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಉಚಿತ ಹೃದಯ ಮತ್ತು ನೇತ್ರ ತಪಾಸಣಾ ಶಿಬಿರದಲ್ಲಿ ಮಾತನಾಡುತ್ತಿದ್ದರು.
ಸಾರ್ವಜನಿಕರು ಜೀವನ ಶೈಲಿ ಬದಲಾಯಿಸಿಕೊಳ್ಳಿ, ಒತ್ತಡ ಕಡಿಮೆ ಮಾಡಿಕೊಳ್ಳಿ, ಪೋಷಕಾಂಶವಿರುವ ಆಹಾರ ಸೇವಿಸಿ. ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವೆಚ್ಚಗಳು ದುಬಾರಿಯಾಗಿರುವ ಸನ್ನಿವೇಶದಲ್ಲಿ ಗ್ರಾಮೀಣ ಭಾಗದ ಜನರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಹೆಚ್ಚು ಸಹಕಾರಿಯಾಗಿವೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಸಂಘ ಅಧ್ಯಕ್ಷ ಸಿ.ಆರ್. ಲಕ್ಕುಂಡಿಮಠ, ಇಂದಿನ ಆಧುನಿಕ ಜೀವನ ಶೈಲಿಯು ಹೃದಯ ರೋಗಕ್ಕೆ ಪ್ರಮುಖ ಕಾರಣವಾಗಿದೆ. ಹೃದಯ ಮತ್ತು ಕಣ್ಣು ಮಾನವನ ಪ್ರಮುಖ ಅಂಗಗಳಾಗಿವೆ. ಹಿರಿಯ ನಾಗರಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಮುಂಜಾನೆಯಿಂದಲೇ ನೂರಾರು ಜನರು ಶಿಬಿರದ ಸ್ಥಳಕ್ಕೆ ಆಗಮಿಸಿದ್ದರು. ಚಿಕಿತ್ಸೆಗೆ ಬಂದವರಿಗೆ ಉಚಿತ ಹೃದಯ ತಪಾಸಣೆ, ಇಸಿಜಿ, ಇಕೋ, ಶುಗರ್, ಬಿಪಿ ಪರೀಕ್ಷೆಗಳನ್ನು ನಡೆಸಲಾಯಿತು. ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಅನೇಕರು ತಪಾಸಣೆಗೊಳಪಟ್ಟರು. ಮಧ್ಯಾಹ್ನದವರೆಗೂ ನಡೆದ ಶಿಬಿರದಲ್ಲಿ ಸುಮಾರು 258ಕ್ಕೂ ಅಧಿಕ ಜನರು ಹೃದಯ ತಪಾಸಣೆ ಹಾಗೂ 228ಕ್ಕೂ ಹೆಚ್ಚು ಜನ ನೇತ್ರ ತಪಾಸಣೆಗೊಳಗಾದರು.
ಕಚೇರಿಯ ಬಿಸಿ ಯೋಜನಾಧಿಕಾರಿ ಚಂದ್ರಶೇಖರ, ಆಂತರಿಕ ಲೆಕ್ಕಪರಿಶೋಧಕರು ಚಂದ್ರಹಾಸ, ಲಕ್ಷ್ಮೀಶ್ವರ ವಲಯದ ಮೇಲ್ವಿಚಾರಕ ನಿಂಗಪ್ಪ ಪಾಟೀಲ್, ಸೋಮೇಶ್ವರ ವಲಯದ ಮೇಲ್ವಿಚಾರಕಿ ಶ್ರುತಿ, ಸೇವಾ ಪ್ರತಿನಿಧಿಗಳಾದ ಗಿರಿಜಾ, ಶೋಭಾ, ನಿರ್ಮಲಾ, ಲತಾ, ವಾಹಿದಾ, ಮಂಗಳ, ಈರಮ್ಮಾ. ವಾಣಿ, ಲಕ್ಷ್ಮೀ, ಸಹನಾ, ಈರಮ್ಮ, ನಿರ್ಮಲಾ, ಗಂಗಮ್ಮ, ಮಂಜುಳಾ, ಹಾಗೂ ಜಯಪ್ರಿಯ ಕಣ್ಣಿನ, ನಾರಾಯಣ ಹೃದಯಾಲಯದ ವೈದ್ಯರು, ಸಿಬ್ಬಂದಿ ಹಾಜರಿದ್ದರು.
ಈ ಸಂದರ್ಭದಲ್ಲಿ ಚಂಬಣ್ಣ ಬಾಳಿಕಾಯಿ, ಪ್ರಕಾಶ ಉಪನಾಳ, ಚನ್ನಪ್ಪ ಕೋಲಕಾರ, ಎಂ.ಕೆ. ಕಳ್ಳಮಠ, ನೀಲಪ್ಪ ಕರ್ಜಕ್ಯಣ್ಣವರ, ಎಸ್‌ಡಿಎಮ್ ನ ವೀರೇಶ, ಶಿರಹಟ್ಟಿ,ಲಕ್ಷೇಶ್ವರ ತಾಲೂಕಿನ ಧರ್ಮಸ್ಥಳ ಸಂಘದ ಯೋಜನಾಧಿಕಾರಿ ಪುನೀಶ ಓಲೆಕಾರ, ಸೇರಿದಂತೆ ಹಲವರು ಭಾಗಿಯಾಗಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP