

ಬಳ್ಳಾರಿ, 27 ನವೆಂಬರ್ (ಹಿ.ಸ.) :
ಆ್ಯಂಕರ್ : ಕೇಂದ್ರ ಮತ್ತು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ರಾಜ್ಯದ ಬೆಂಗಳೂರು, ಚಿಕ್ಕಮಗಳೂರು, ಬೆಳಗಾವಿ, ರಾಯಚೂರು ಮತ್ತು ಚಾಮರಾಜನಗರ ಸೇರಿ ಐದು ಜಿಲ್ಲೆಗಳಲ್ಲಿ ನಡೆಸಲಾದ ಸಮೀಕ್ಷೆಯಿಂದ ಶೇ.99 ರಷ್ಟು ಮಕ್ಕಳು ಸಾಮಾಜಿಕ ಜಾಲತಾಣಗಳಿಗೆ ವ್ಯಸನಿಗಳಾಗಿದ್ದು, ಮಾನಸಿಕವಾಗಿ ಸದೃಢರಾಗಿಲ್ಲ, ಖಿನ್ನತೆಗೆ ಒಳಗಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಅವರು ಹೇಳಿದ್ದಾರೆ.
ನಗರದ ಬಿಡಿಎಎ ಸಭಾಂಗಣದಲ್ಲಿ ರೀಡ್ಸ್ ಸಂಸ್ಥೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಸಿಎಸಿಎಲ್-ಕೆ ಇವರ ಸಂಯುಕ್ತಾಶ್ರಯದಲ್ಲಿ ‘ಬಾಲ್ಯವಿವಾಹ ತಡೆಗಟ್ಟುವಲ್ಲಿ ಸವಾಲುಗಳು ಮತ್ತು ಪರಿಹಾರಗಳು’ ಎಂಬ ವಿಷಯದ ಕುರಿತು ಏರ್ಪಡಿಸಿದ್ದ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಪೋಷಕರು ಪ್ರಸ್ತುತದಲ್ಲಿ ಮಕ್ಕಳಿಗೆ ಒಳ್ಳೆಯ ಚಿಂತನೆಗಳನ್ನು ಬಿತ್ತಬೇಕಿದೆ. ಅವರ ಚಲನ-ವಲನಗಳ ಮೇಲೆ ನಿಗಾವಹಿಸಬೇಕು. ಉತ್ತಮ ನಾಗರಿಕರಾನ್ನಾಗಿಸಬೇಕು ಎಂದು ಹೇಳಿದರು.
ದೇಶದಲ್ಲಿ 2030 ರೊಳಗೆ ಬಾಲ್ಯವಿವಾಹ ಮುಕ್ತ ಭಾರತವನ್ನಾಗಿಸಲು ಎಲ್ಲಾ ಇಲಾಖೆ, ಸಂಘ-ಸಂಸ್ಥೆಗಳು, ಸಾರ್ವಜನಿಕರು ಕೈಜೋಡಿಸಬೇಕು ಎಂದು ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಅನ್ನಪೂರ್ಣದೇವಿ ಅವರು ಕರೆ ನೀಡಿದ್ದಾರೆ ಎಂದರು.
ಬಾಲ್ಯವಿವಾಹ ನಿಷೇಧಕ್ಕೆ ರಾಜ್ಯ ಸರ್ಕಾರವು ಅನೇಕ ಎಸ್‍ಓಪಿ ಗಳನ್ನು ಜಾರಿತಂದಿದೆ. ಸಮಾಜದಲ್ಲಿ ಅನಿಷ್ಠ ಪಿಡುಗಾಗಿ ಬೇರೂರಿರುವ ಬಾಲ್ಯವಿವಾಹ ಪದ್ಧತಿಯನ್ನು ಸಂಪೂರ್ಣವಾಗಿ ಕಿತ್ತೊಗೆಯಬೇಕಿದೆ. ಹಾಗಾಗಿ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕಿದೆ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಅವರು ಮಾತನಾಡಿ, ರಾಜ್ಯದಲ್ಲಿ 60 ಸಾವಿರಕ್ಕೂ ಹೆಚ್ಚು ಬಾಲ್ಯ ವಿವಾಹ ನಿಷೇಧಾಧಿಕಾರಿಗಳು ಇದ್ದು, ಅಂದರೆ ಸರಿ-ಸುಮಾರು ಪ್ರತಿ ಜಿಲ್ಲೆಯಲ್ಲಿ 2,000 ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ ಬಾಲ್ಯವಿವಾಹ, ಪೋಕ್ಸೋ ಪ್ರಕರಣಗಳು ಕಂಡುಬರುತ್ತಿವೆ. ಈ ಕುರಿತು ಪ್ರತಿಯೊಬ್ಬರೂ ವಿಮರ್ಶೆ ಮಾಡಿಕೊಳ್ಳಬೇಕಿದೆ. ಬಾಲ್ಯವಿವಾಹ, ಪೋಕ್ಸೋ ಕಾಯ್ದೆಗಳ ಕುರಿತು ಅರಿವು ಹೊಂದಬೇಕಿದೆ. ಸರ್ಕಾರ, ಇಲಾಖೆ ಮತ್ತು ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಸಾರ್ವಜನಿಕರು ಸಹ ಕೈಜೋಡಿಸಬೇಕು ಎಂದು ಹೇಳಿದರು.
ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಡಾ.ಶೋಭಾರಾಣಿ ವಿ.ಜೆ ಅವರು ಮಾತನಾಡಿ, ಸರ್ಕಾರ ಶಿಕ್ಷಣಕ್ಕಾಗಿ ಹಲವು ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ಇವುಗಳನ್ನು ಮಕ್ಕಳು ಬಳಸಿಕೊಳ್ಳಬೇಕು. ಜ್ಞಾನದಿಂದ ಮಾತ್ರ ಎಲ್ಲವನ್ನು ಪಡೆಯಲು ಸಾಧ್ಯ. ಹಾಗಾಗಿ ಮಕ್ಕಳು ಓದುವ ವಯಸ್ಸಿನಲ್ಲಿ ಓದಬೇಕು. ಪ್ರೀತಿ-ಪ್ರೇಮ, ಸಾಮಾಜಿಕ ಜಾಲತಾಣಗಳು ಹಾಗೂ ಇತರೆ ಚಟುವಟಿಕೆಗಳಿಗೆ ಆಕರ್ಷಿತರಾಗಬಾರದು ಎಂದು ಕಿವಿಮಾತು ಹೇಳಿದರು.
ರೀಡ್ಸ್ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಸಿ.ತಿಪ್ಪೇಶಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ಭವಿಷ್ಯ ಮಕ್ಕಳು. ಮಕ್ಕಳ ಮೇಲೆ ಹಲವಾರು ರೀತಿಯ ಶೋಷಣೆಗಳಾಗುತ್ತಿರುವುದು ಶೋಷನೀಯ ಸಂಗತಿ. ಬಾಲ್ಯವಿವಾಹ, ಪೋಕ್ಸೋ ಘಟನೆಗಳಲ್ಲಿ ಅಪ್ರಾಪ್ತೆಯರು ಬಾಲಗರ್ಭೀಣಿಯರಾಗುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಬಡತನ, ಅನಕ್ಷರತೆ. ಸರ್ಕಾರ, ಇಲಾಖೆಗಳ ಜೊತೆಗೂಡಿ ಸ್ವಯಂ-ಸೇವಾ ಸಂಸ್ಥೆಗಳು ಸಮುದಾಯಗಳಲ್ಲಿ ಜಾಗೃತಿ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಕ್ಕಳ ರಕ್ಷಣೆಗಾಗಿ ಕಾನೂನು ಪುಸ್ತಕ (2ನೇ ಆವೃತ್ತಿ) ಪುಸ್ತಕ, ಮಕ್ಕಳ ಸ್ನೇಹಿ ಕಿರುಪುಸ್ತಕ ಮತ್ತು ಬಾಲ್ಯವಿವಾಹ ನಿಷೇಧ ಕುರಿತು ಪೋಸ್ಟರ್ ಬಿಡುಗಡೆಗೊಳಿಸಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನಿಕಟಪೂರ್ವ ಅಧ್ಯಕ್ಷ ಹೆಚ್.ಸಿ ರಾಘವೇಂದ್ರ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ‘ಬಾಲ್ಯವಿವಾಹ ತಡೆಗಟ್ಟುವಲ್ಲಿ ಸವಾಲುಗಳು ಮತ್ತು ಪರಿಹಾರಗಳು’ ಎಂಬ ವಿಷಯ ಕುರಿತು ವಿಸ್ತಾರವಾದ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಡಿವೈಎಸ್‍ಪಿ ಹಾಗೂ ಎಸ್.ಜೆ.ಪಿ.ಯು ಹಿರಿಯ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿ ಚಂದ್ರಕಾಂತ ನಂದಾರೆಡ್ಡಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಸುಭದ್ರಾದೇವಿ, ರೀಡ್ಸ್ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯ ಹನುಮಂತ ರೆಡ್ಡಿ, ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥ ಸುರೇಶ್ ಸೇರಿದಂತೆ ಸಹಾಯವಾಣಿಯ ಸಂಯೋಜಕರು 1098 ಮತ್ತು ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಯುವಕ-ಯುವತಿಯರು, ಸಾರ್ವಜನಿಕರು ಉಪಸ್ಥಿತರಿದ್ದರು.
ರೀಡ್ಸ್ ಸಂಸ್ಥೆಯ ಸಂಯೋಜಕ ಕೆ.ಎಂ.ತಿಪ್ಪೇಸ್ವಾಮಿ ಸ್ವಾಗತಿಸಿ, ಕಾರ್ಯಾಗಾರ ನಿರೂಪಿಸಿದರು. ಯೋಜನಾ ವ್ಯವಸ್ಥಾಪಕಿ ಕೆ.ಸೀತಾಮಹಾಲಕ್ಷ್ಮಿ ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್