
ಗದಗ, 25 ನವೆಂಬರ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲಾಡಳಿತ ಕಚೇರಿ ಎದುರು ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಅನಿರ್ದಿಷ್ಟಾವಧಿ ಹೋರಾಟ ಇಂದಿನಿಂದ ಆರಂಭವಾಗಿದೆ. “ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಕಲಿಸಿದ ನಾವು ಇಂದು ಮೂರಾಭಟ್ಟಿಯಾಗಿದ್ದೇವೆ” ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ಉಪನ್ಯಾಸಕರು, ಹಿರಿತನ ಹಾಗೂ ಸೇವಾ ಅನುಭವದ ಆಧಾರದ ಮೇಲೆ ನೇಮಕ ಮಾಡಬೇಕೆಂಬ ಆಗ್ರಹದೊಂದಿಗೆ ಹೋರಾಟಕ್ಕೆ ಇಳಿದಿದ್ದಾರೆ.
ಕೌನ್ಸೆಲಿಂಗ್ ತಕ್ಷಣ ನಿಲ್ಲಿಸಬೇಕು, ಉಪನ್ಯಾಸಕರ ಕಣ್ಣೀರು
ಬೆಂಗಳೂರುದಲ್ಲಿ ನಡೆಯುತ್ತಿರುವ ಕೌನ್ಸೆಲಿಂಗ್ ಕೂಡಲೇ ಸ್ಥಗಿತಗೊಳಿಸಬೇಕೆಂದು ಅತಿಥಿ ಉಪನ್ಯಾಸಕರು ಬೇಡಿಕೆ ಇಟ್ಟಿದ್ದಾರೆ. ಸೇವಾ ಭದ್ರತೆ ಸಿಗದಿದ್ದರೆ “ನಾವು ದಯಾಮರಣಕ್ಕೆ ಸಹ ಸಿದ್ದ” ಎಂದು ಕೆಲವು ಉಪನ್ಯಾಸಕಿಯರು ಕಣ್ಣೀರು ಹಾಕಿದ್ದಾರೆ.
ಹೈ ಡ್ರಾಮಾ: ಕೈಯಲ್ಲಿ ಚಾಕು–ಪೆಟ್ರೋಲ್ ಹಿಡಿದು ಆತ್ಮಹತ್ಯೆ ಯತ್ನ
ಹೋರಾಟದ ಮಧ್ಯೆ ಕೆಲವರು ಕೈಯಲ್ಲಿ ಚಾಕು ಹಾಗೂ ಪೆಟ್ರೋಲ್ ಹಿಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ಮಧ್ಯ ಪ್ರವೇಶಿಸಿ ಅನಾಹುತ ತಪ್ಪಿಸಿದರು.
ಸ್ವಾಮೀಜಿಗಳ ಬೆಂಬಲ, ತೋಂಟದಾರ್ಯ ಪೀಠಾಧಿಪತಿ ಹೋರಾಟ ವೇದಿಕೆಗೆ
ಗದಗ ತೋಂಟದಾರ್ಯ ಮಠದ ಪೀಠಾಧಿಪತಿ ಡಾ. ಸಿದ್ಧರಾಮ ಸ್ವಾಮೀಜಿಗಳು ಹೋರಾಟಕ್ಕೆ ನೇರ ಸಾಥ್ ನೀಡಿ ಮಾತನಾಡಿದರು:
“20 ವರ್ಷಗಳಿಂದ ಸೇವೆ ಸಲ್ಲಿಸಿದವರನ್ನು ಕೈಬಿಟ್ಟರೆ ಅವರ ಬದುಕೇ ಬೀದಿಗೆ ಬೀಳುತ್ತದೆ. ಸರ್ಕಾರ ಮಾನವೀಯತೆಯಿಂದ ನಡೆದು ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಬೇಕು” ಎಂದು ಒತ್ತಾಯಿಸಿದರು.
ರಾಜ್ಯಾದ್ಯಂತ 6 ಸಾವಿರಕ್ಕೂ ಹೆಚ್ಚು ಉಪನ್ಯಾಸಕರ ಭವಿಷ್ಯ ಅತಂತ್ರ
ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಉಪನ್ಯಾಸಕರು ಗದಗದಲ್ಲಿ ಸೇರಿಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯುಜಿಸಿ ನಿಯಮಾವಳಿಯ ಪ್ರಕಾರ ಕೇವಲ ನೆಟ್ ಹಾಗೂ ಸೆಟ್ ಅಥವಾ ಪಿಹೆಚ್‌ಡಿ ಹೊಂದಿರುವವರಿಗೆ ಮಾತ್ರ ಸಂದರ್ಶನಕ್ಕೆ ಅವಕಾಶ ನೀಡಿರುವುದರಿಂದ, ಕಳೆದ 15–20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಾವಿರಾರು ಉಪನ್ಯಾಸಕರ ಭವಿಷ್ಯ ಅನಿಶ್ಚಿತವಾಗಿದೆ.
“ಸೇವಾ ಅನುಭವದ ಆಧಾರದ ಮೇಲೆ ನೇಮಕ ಸಾಧ್ಯ” ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಕೂಡ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಅತಿಥಿ ಉಪನ್ಯಾಸಕರ ದೀರ್ಘಕಾಲದ ಗೊಂದಲಕ್ಕೆ ಸರ್ಕಾರ ಯಾವ ರೀತಿಯಲ್ಲಿ ಪರಿಹಾರ ಕಂಡುಕೊಳ್ಳುತ್ತದೆ ಎನ್ನುವುದು ಕಾದು ನೋಡಬೇಕಾಗಿದೆ. ಹೋರಾಟ ಮುಂದುವರೆದಿದ್ದು, ಉಪನ್ಯಾಸಕರು ಸೇವಾ ಭದ್ರತೆ ಸಿಗುವವರೆಗೂ ಹಿಂಜರಿಯುವುದಿಲ್ಲ ಆಗ್ರಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP