
ಚಂಡೀಗಡ, 22 ನವೆಂಬರ್ (ಹಿ.ಸ.) :
ಆ್ಯಂಕರ್ : ಪಂಜಾಬ್ ಪೊಲೀಸರು ಗಡಿಯಾಚೆಯಿಂದ ನಡೆಯುತ್ತಿದ್ದ ದೊಡ್ಡ ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ಪತ್ತೆಹಚ್ಚಿ, 50 ಕೆಜಿ ಹೆರಾಯಿನ್‌ನ್ನು ವಶಪಡಿಸಿಕೊಂಡಿದ್ದಾರೆ. ಕಪುರ್ತಲಾದ ಸಂದೀಪ್ ಸಿಂಗ್ ಅಲಿಯಾಸ್ ‘ಸೀಮಾ’ ಎಂಬಾತನನ್ನು ಮಾದಕವಸ್ತು ವಿರೋಧಿ ದಳ ಬಂಧಿಸಿದೆ ಎಂದು ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ.
ಒಂದು ಕೆಜಿ ಹೆರಾಯಿನ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು ₹5 ಕೋಟಿಯ ಮೌಲ್ಯ ಹೊಂದಿದ್ದು, ವಶಪಡಿಸಿಕೊಂಡ ಮಾದಕವಸ್ತುವಿನ ಒಟ್ಟು ಮೌಲ್ಯ ₹250 ಕೋಟಿಗೆ ಅಂದಾಜಿಸಲಾಗಿದೆ. ಪಾಕಿಸ್ತಾನದ ಐಎಸ್‌ಐ ಬೆಂಬಲಿತ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದ ಆರೋಪಿಯ ವಿರುದ್ಧ ಈಗಾಗಲೇ ಐದು ಮಾದಕವಸ್ತು ಕಳ್ಳಸಾಗಣೆ ಪ್ರಕರಣಗಳು ದಾಖಲಾಗಿವೆ.
ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಸಂದೀಪ್ ಮತ್ತೆ ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಳಿವಿನ ಆಧಾರದ ಮೇಲೆ ನಡೆಸಿದ ದಾಳಿಯಲ್ಲಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಪಂಜಾಬ್ ಸೇರಿದಂತೆ ಇತರ ರಾಜ್ಯಗಳ ಕಳ್ಳಸಾಗಣೆದಾರರ ಸಂಪರ್ಕ ಮತ್ತು ಪೂರೈಕೆ ಜಾಲದ ಬಗ್ಗೆ ಆರೋಪಿಯನ್ನು ವಿಚಾರಣೆ ಮಾಡಲಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa