
ನವದೆಹಲಿ, 22 ನವೆಂಬರ್ (ಹಿ.ಸ.):
ಆ್ಯಂಕರ್:ಶಿಕ್ಷಣ ಸಚಿವಾಲಯವು ಡಿಸೆಂಬರ್ 2ರಿಂದ ವಾರಣಾಸಿಯಲ್ಲಿ ಕಾಶಿ ತಮಿಳು ಸಂಗಮಮ್ 4.0 ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಡಿಸೆಂಬರ್ 15ರವರೆಗೆ ನಡೆಯಲಿರುವ ಈ ಮಹತ್ವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಮಿಳುನಾಡಿನಿಂದ 1,400 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಸಚಿವಾಲಯ ಶನಿವಾರ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರ ಪ್ರೇರಣೆಯಿಂದ ನಡೆಯುತ್ತಿರುವ ಈ ಉಪಕ್ರಮದ ಉದ್ದೇಶ, ತಮಿಳುನಾಡು ಮತ್ತು ಕಾಶಿ ನಡುವಿನ ಪ್ರಾಚೀನ ಸಾಂಸ್ಕೃತಿಕ, ಭಾಷಾ ಮತ್ತು ಜ್ಞಾನ ಪರಂಪರೆಯ ಬಂಧಗಳನ್ನು ಮತ್ತಷ್ಟು ಬಲಪಡಿಸುವುದು. ಕಾರ್ಯಕ್ರಮವನ್ನು ಐಐಟಿ ಮದ್ರಾಸ್ ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯವು ಅನೇಕ ಕೇಂದ್ರ ಸಚಿವಾಲಯಗಳು ಹಾಗೂ ಉತ್ತರ ಪ್ರದೇಶ ಸರ್ಕಾರದ ಸಹಯೋಗದಲ್ಲಿ ಆಯೋಜಿಸುತ್ತಿವೆ.
2022ರಲ್ಲಿ ಆರಂಭವಾದ ಕಾಶಿ ತಮಿಳು ಸಂಗಮಮ್ ಈಗಾಗಲೇ ವ್ಯಾಪಕ ಜನಪಾಲ್ಗೊಳ್ಳುವಿಕೆಯಿಂದ ಇಬ್ಬರೂ ನಾಗರಿಕತೆಗಳ ನಡುವೆ ಗಟ್ಟಿಯಾದ ಸಾಂಸ್ಕೃತಿಕ ಸೇತುವೆಯನ್ನು ನಿರ್ಮಿಸಿದೆ. ಈ ವರ್ಷದ ಮುಖ್ಯ ವಿಷಯ ‘ತಮಿಳು ಕಲಿಯಿರಿ – ತಮಿಳು ಕಾರ್ಕಳಂ’ ಆಗಿದ್ದು, ತಮಿಳು ಭಾಷೆಯನ್ನು ದೇಶಾದ್ಯಂತ ಪ್ರೋತ್ಸಾಹಿಸುವುದಕ್ಕೆ ಆದ್ಯತೆ ನೀಡಲಾಗಿದೆ.
ಎಂಟು ದಿನಗಳ ಅನುಭವಯಾತ್ರೆಯ ಭಾಗವಾಗಿ ವಿದ್ಯಾರ್ಥಿಗಳು, ಶಿಕ್ಷಕರು, ಕೃಷಿ ಹಾಗೂ ಸಂಬಂಧಿತ ವಲಯಗಳ ಕಾರ್ಯಕರ್ತರು, ಕುಶಲಕರ್ಮಿಗಳು, ಮಹಿಳಾ ಗುಂಪುಗಳು, ಮಾಧ್ಯಮ ಪ್ರತಿನಿಧಿಗಳು ಮತ್ತು ಆಧ್ಯಾತ್ಮಿಕ ವಿದ್ವಾಂಸರು ವಾರಣಾಸಿ, ಪ್ರಯಾಗ್‌ರಾಜ್ ಮತ್ತು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುವರು.
ಕಾಶಿಯ ತಮಿಳು ಪರಂಪರೆಯ ತಾಣಗಳಿಗೆ ವಿಶೇಷ ಪ್ರವಾಸವೂ ಈ ಕಾರ್ಯಕ್ರಮದ ಭಾಗವಾಗಿದೆ. ಸುಬ್ರಮಣ್ಯ ಭಾರತಿಯವರ ಪೂರ್ವಜರ ಮನೆಯಿಂದ ಹಿಡಿದು ಕೇದಾರ ಘಾಟ್, ‘ಲಿಟಲ್ ತಮಿಳುನಾಡು’ ಪ್ರದೇಶದಲ್ಲಿರುವ ಕಾಶಿ ಮದಮ್, ಕಾಶಿ ವಿಶ್ವನಾಥ ಹಾಗೂ ಮಾತಾ ಅನ್ನಪೂರ್ಣ ದೇವಾಲಯಗಳಿಗೆ ಪ್ರತಿನಿಧಿಗಳನ್ನು ಕರೆದೊಯ್ಯಲಾಗುವುದು. ಬಿಎಚ್‌ಯುನ ತಮಿಳು ವಿಭಾಗದಲ್ಲೂ ಹಲವು ಸಾಹಿತ್ಯ ಸಂವಾದಗಳು ನಡೆಯಲಿವೆ.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ‘ಸಂತ ಅಗಸ್ತ್ಯ ವಾಹನ ಯಾತ್ರೆ’ ಹೆಸರಿನ ವಿಶೇಷ ಯಾತ್ರೆಯನ್ನು ಡಿಸೆಂಬರ್ 2ರಂದು ತೆಂಕಶಿಯಿಂದ ಪ್ರಾರಂಭಿಸಲಾಗುತ್ತಿದೆ. ಡಿಸೆಂಬರ್ 10ರಂದು ಕಾಶಿಯಲ್ಲಿ ಮುಕ್ತಾಯಗೊಳ್ಳುವ ಈ ಯಾತ್ರೆ ತಮಿಳುನಾಡು ಮತ್ತು ಕಾಶಿ ನಡುವಿನ ಪ್ರಾಚೀನ ಸಾಂಸ್ಕೃತಿಕ ಮಾರ್ಗಗಳನ್ನು ಪುನರುಜ್ಜೀವನಗೊಳಿಸುವ ಹೆಜ್ಜೆಯಾಗಲಿದೆ. ಪಾಂಡ್ಯ ದೊರೆ ಆದಿ ವೀರ ಪರಾಕ್ರಮ ಪಾಂಡಿಯನ್ ಅವರ ಏಕತಾ ಪ್ರಯಾಣವನ್ನು ಈ ಯಾತ್ರೆ ಸ್ಮರಿಸುತ್ತದೆ.
ಇದೇ ವೇಳೆ ‘ತಮಿಳು ಕಾರ್ಕಳಂ’ ಅಭಿಯಾನದಡಿ 50 ತಮಿಳು ಶಿಕ್ಷಕರು ವಾರಣಾಸಿಯ ಶಾಲೆಗಳಲ್ಲಿ ಬೋಧನೆ ನಡೆಸಲಿದ್ದಾರೆ. ಉತ್ತರ ಪ್ರದೇಶದ ವಿದ್ಯಾರ್ಥಿಗಳಿಗಾಗಿ ತಮಿಳುನಾಡು ಅಧ್ಯಯನ ಪ್ರವಾಸವೂ ಆಯೋಜಿಸಲಾಗಿದ್ದು, 300 ವಿದ್ಯಾರ್ಥಿಗಳನ್ನು 15 ದಿನಗಳ ಕಾಲ ತಮಿಳುನಾಡಿಗೆ ಕಳುಹಿಸಿ ಅಲ್ಲಿ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಪರಿಚಯ ನೀಡಲಾಗುತ್ತದೆ.
ಎಲ್ಲಾ ವಿಭಾಗಗಳ ನೋಂದಣಿ ಪೋರ್ಟಲ್ kashitamil.iitm.ac.in ನಲ್ಲಿ ಲಭ್ಯವಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 21, 2025, ರಾತ್ರಿ 8 ಗಂಟೆ. ಆಯ್ಕೆ ರಸಪ್ರಶ್ನೆ ನವೆಂಬರ್ 23ರಂದು ನಡೆಯಲಿದೆ. ತಮಿಳುನಾಡು ಅಧ್ಯಯನ ಪ್ರವಾಸಕ್ಕಾಗಿ ವಿಶೇಷ ಪೋರ್ಟಲ್ kashitamil.bhu.edu.in ನಲ್ಲಿ ನೋಂದಣಿ ಮಾಡಬಹುದು.
ಕಾಶಿ ತಮಿಳು ಸಂಗಮಮ್ 4.0 ಭಾರತದ ಸಾಂಸ್ಕೃತಿಕ ವೈವಿಧ್ಯತೆಯ ಏಕತೆಯ ಸಂದೇಶವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಪ್ರಯತ್ನವೆಂದು ಸಚಿವಾಲಯ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa