
ಕೊಪ್ಪಳ, 15 ನವೆಂಬರ್ (ಹಿ.ಸ.) :
ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಎನ್.ಸಿ.ಡಿ ವಿಭಾಗ, ಕೊಪ್ಪಳ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಇರಕಲ್‌ಗಡಾ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರದಂದು ವಿಶ್ವ ಮಧುಮೇಹ ದಿನಾಚರಣೆ ಜಾಗೃತಿ ಕಾರ್ಯಕ್ರಮ ಹಾಗೂ ಆರೋಗ್ಯ ಶಿಬಿರವನ್ನು ಇರಕಲ್‌ಗಡಾ ಆರೋಗ್ಯ ಕೇಂದ್ರದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಲಕ್ಷಿ ಕೆ. ಅವರು, ಪ್ರತೀ ವರ್ಷ ನವೆಂಬರ್ 14 ರಂದು ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ. ಇದರ ಉದ್ದೇಶ ಸಕ್ಕರೆ ಖಾಯಿಲೆ ನಿಯಂತ್ರಣ ಹಾಗೂ ಮುಂಜಾಗ್ರತೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವುದಾಗಿದೆ. ಜೀವನ ಶೈಲಿಯಿಂದ ಬರುವ ಅಸಾಂಕ್ರಾಮಿಕ ರೋಗಗಳಲ್ಲಿ ಮಧುಮೇಹ ಕೂಡ ಒಂದಾಗಿದೆ. ಆಧುನಿಕ ಆಹಾರ ಪದ್ಧತಿ ಹಾಗೂ ಬದಲಾದ ಜೀವನ ಕ್ರಮದಿಂದ ಆಹಾರ, ವ್ಯಾಯಾಮ, ವಿಹಾರ ಇವು ಮನುಷ್ಯನಿಗೆ ಉತ್ತಮವಾಗಿರಬೇಕು. ಇವುಗಳ ವಿರುದ್ದ ಜೀವನ ನಡೆಸಿದರೆ ಮಧುಮೇಹ ಖಾಯಿಲೆ ಬರುತ್ತದೆ ಎಂದು ಹೇಳಿದರು.
ಮಧುಮೇಹದಲ್ಲಿ ಎರಡು ವಿಧಗಳಿವೆ. ಅವುಗಳ ನಿಯಂತ್ರಣಕ್ಕಾಗಿ ನಮ್ಮ ಜೀವನ, ಆರೋಗ್ಯ ಶೈಲಿ ಉತ್ತಮವಾಗಿರಬೇಕು. ಅತಿಯಾದ ಮಧುಮೇಹದಿಂದ ಕಣ್ಣು ಮಂಜಾಗುವುದು, ಹಸಿವಾಗುವುದು, ಸುಸ್ತಾಗುವುದು, ಪದೇ ಪದೇ ಮೂತ್ರವಿಸರ್ಜನೆ, ಒಣಗಿದ ಬಾಯಿ, ವಿಪರೀತ ಬಾಯಾರಿಕೆ ಇಂತಹ ಲಕ್ಷಣಗಳು ಕಂಡುಬ0ದರೆ ತಮ್ಮ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಪರೀಕ್ಷಿಸಿ, ಚಿಕಿತ್ಸೆ ಪಡೆದುಕೊಳ್ಳಬೇಕು. ಮಧುಮೇಹ ಬರದಂತೆ ಎಚ್ಚರಿಕೆ ವಹಿಸಲು ಪ್ರತಿ ದಿನ ಕನಿಷ್ಠ ಒಂದು ಗಂಟೆ ದೈಹಿಕ ಚಟುವಟಿಕೆ, ಯೋಗ, ಜ್ಞಾನ ಮತ್ತು ಪ್ರಾಣಾಯಾಮ ಮಾಡಬೇಕು. ನಿಗದಿತ ಸಮಯಕ್ಕೆ ದಿನಾಲೂ ಪೌಷ್ಠಿಕ ಆಹಾರ ಸೇವನೆ, ಅತಿಯಾದ ಕೊಬ್ಬು ಮತ್ತು ಸಿಹಿ ಪದಾರ್ಥಗಳ ಸೇವನೆ ಹಿತ-ಮಿತವಾಗಿರಲಿ. ಎಲ್ಲಾ ಬಗೆಯ ದ್ವಿದಳ ಧಾನ್ಯಗಳನ್ನು ಹಾಗೂ ಹಸಿರು ತರಕಾರಿಗಳನ್ನು ದಿನ ನಿತ್ಯದ ಆಹಾರದಲ್ಲಿ ಬಳಸಬೇಕು. ಮಧುಮೇಹ ರೋಗಿಯಾಗಿದ್ದರೆ, ನಿಮ್ಮ ಜೊತೆಯಲ್ಲಿ ಸಕ್ಕರೆ ಅಥವಾ ಸಿಹಿ ತಿಂಡಿಗಳನ್ನು ತೆಗೆದುಕೊಂಡು ಹೋಗಿ. ಯಾವುದೇ ರೀತಿಯ ತಂಬಾಕು ಮತ್ತು ಮದ್ಯಪಾನ ಸೇವನೆ ಮಾಡಬಾರದು. ಆಲಸ್ಯಕರ ಜೀವನ ಶೈಲಿಯನ್ನು ಬಿಟ್ಟು ಚಟುವಟಿಕೆಯ ಜೀವನ ಶೈಲಿಯನ್ನು ಪ್ರಾರಂಭಿಸಿ, ಉತ್ತಮ ಜೀವನ ವಿಧಾನಕ್ಕೆ, ಆರೋಗ್ಯಕ್ಕೆ ನಿಯಮಗಳನ್ನು ಪಾಲಿಸಿ, ತಮ್ಮ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು, ಇತರರಿಗೂ ಅರಿವು ಮೂಡಿಸಿ, ಮಧುಮೇಹ ಮುಕ್ತ ಸಮಾಜವನ್ನು ಮಾಡಲು ಸಹಕರಿಸುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ ಅವರು ಮಾತನಾಡಿ, ಇತರೆ ಅಸಾಂಕ್ರಾಮಿಕ ರೋಗಗಳಾದ ಅಧಿಕ ರಕ್ತದೊತ್ತಡ, ಕ್ಯಾನ್ಸರ್, ಹೃದಯಾಘಾತ, ಅಧಿಕ ತೂಕ, ಪಾರ್ಶ್ವವಾಯು, ಮಾನಸಿಕ ಆರೋಗ್ಯ ಒತ್ತಡ ರಹಿತ ಹಾಗೂ ಗುಣಮಟ್ಟದ ಜೀವನ ಶೈಲಿಯ ಆರೋಗ್ಯ ಕುರಿತು ವಿವರವಾಗಿ ಮಾತನಾಡಿದರು.
ಜಿಲ್ಲಾ ಎನ್.ಸಿ.ಡಿ ಸಲಹೆಗಾರರಾದ ಡಾ.ಜಯಶ್ರೀ ಅವರು ಮಾತನಾಡಿ, ಮಧುಮೇಹ ನಿಯಂತ್ರಣಕ್ಕೆ ವಹಿಸಬೇಕಾದ ಮುಂಜಾಗ್ರತೆ ಕ್ರಮಗಳು ಹಾಗೂ ಆರೋಗ್ಯ ಸಂಸ್ಥೆಗಳಲ್ಲಿ ಅಸಾಂಕ್ರಾಮಿಕ ರೋಗಗಳಿಗೆ ನೀಡುವ ಸೇವಾ ಸೌಲಭ್ಯಗಳ ಕುರಿತು ವಿವರವಾಗಿ ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ಕೆ. ಅವರು, ಆರ್.ಸಿ.ಹೆಚ್ ಕಾರ್ಯಕ್ರಮ, ಬಾಲ್ಯವಿವಾಹ ನಿಷೇಧ, ಕುಟುಂಬ ಕಲ್ಯಾಣ, ಕ್ಷಯರೋಗ ನಿರ್ಮೂಲನೆ, ಕುಷ್ಠರೋಗ ನಿರ್ಮೂಲನೆ ಹಾಗೂ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಸದೀರ್ಘವಾಗಿ ಮಾತನಾಡಿದರು. ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ಮಾಡಿ, ಚಿಕಿತ್ಸೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪ್ರ.ದ.ಸ ವಿಜಯಕುಮಾರ, ಶುಶ್ರೂಷಣಾಧಿಕಾರಿ ಪಾರ್ವತಿ, ಪ್ರಾ.ಆ.ಸುರಕ್ಷಾಧಿಕಾರಿ ಪ್ರಿಯಾಂಕ, ಸರೋಜಿನಿ, ಆರೋಗ್ಯ ನಿರೀಕ್ಷಣಾಧಿಕಾರಿ ಧನರಾಜ, ಸುನಿಲ, ಆಶಾ ಕಾರ್ಯಕರ್ತೆಯರಾದ ಕಲಾವತಿ, ಮಂಜುಳಾ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್