
ಬೆಂಗಳೂರು, 15 ನವೆಂಬರ್ (ಹಿ.ಸ.) :
ಆ್ಯಂಕರ್ : ಪದ್ಮಶ್ರೀ ಪುರಸ್ಕೃತ, ‘ವೃಕ್ಷಮಾತೆ’ ಎಂದು ಖ್ಯಾತಿ ಪಡೆದಿದ್ದ ಸಾಲುಮರದ ತಿಮ್ಮಕ್ಕ ಅವರ ಪಾರ್ಥಿವ ಶರೀರಕ್ಕೆ ಇಂದು ಬೆಂಗಳೂರಿನ ಜ್ಞಾನಭಾರತಿ ಕಲಾ ಗ್ರಾಮದ ಆವರಣದಲ್ಲಿ ರಾಜ್ಯ ಸರ್ಕಾರದ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಗೃಹ ಸಚಿವ ಡಾ. ಜಿ. ಪರಮೇಶ್ವರ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಸೇರಿದಂತೆ ನೂರಾರು ಗಣ್ಯರು, ಪರಿಸರ ಹೋರಾಟಗಾರರು ಹಾಗೂ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದರು.
114 ವರ್ಷದ ತಿಮ್ಮಕ್ಕ, ಅತ್ಯಂತ ಬಡ ಕುಟುಂಬದಲ್ಲಿ ಜನಿಸಿ, ಮಕ್ಕಳಿಲ್ಲ ಎಂಬ ಕೊರಗನ್ನು ಹಸಿರು ಸಂರಕ್ಷಣೆಯ ಪವಿತ್ರ ಧರ್ಮವಾಗಿ ಪರಿವರ್ತಿಸಿಕೊಂಡವರು. ತಮ್ಮ ಬದುಕಿನ ಹಲವು ದಶಕಗಳನ್ನು ಪರಿಸರ ಸಂರಕ್ಷಣೆಗೆ ಅರ್ಪಿಸಿ, 8,000 ಕ್ಕೂ ಹೆಚ್ಚು ಮರಗಳನ್ನು ನೆಟ್ಟು ಬೆಳೆಸಿದವರು. “ಮಕ್ಕಳಿಲ್ಲದ ಕೊರತೆ ಮರಗಳ ರೂಪದಲ್ಲಿ ತೀರಿತು” ಎಂಬ ಅವರ ಮಾತು ನೂರಾರು ಜನರ ಮನಸ್ಸಿನಲ್ಲಿ ಮೂಡಿತ್ತು.
ರಾಜ್ಯ ಸರ್ಕಾರದ ಗೌರವಾರ್ಥವಾಗಿ ಪೊಲೀಸ್ ತಂಡದ ಸಲಾಮು, ಹೂವಿನ ಗೌರವ ನಮನಗಳೊಂದಿಗೆ ಅಂತ್ಯಕ್ರಿಯೆಯ ವಿಧಿಗಳು ನೆರವೇರಿಸಲಾಯಿತು. ಸಾವಿರಾರು ಮರಗಳನ್ನು ತಾಯಿ ಮಮತೆಯಿಂದ ಬೆಳೆಸಿದ ತಿಮ್ಮಕ್ಕನವರ ನಿರ್ಗಮನ ರಾಜ್ಯದ ಪ್ರಕೃತಿ ಚಳವಳಿಗೆ ದೊಡ್ಡ ನಷ್ಟವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa