

ಬಳ್ಳಾರಿ, 15 ನವೆಂಬರ್ (ಹಿ.ಸ.) ,:
ಆ್ಯಂಕರ್ : ಬಳ್ಳಾರಿ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ 23ನೇ ವಾರ್ಡ್‍ನ ಪಿ. ಗಾದೆಪ್ಪ ಮತ್ತು 28ನೇ ವಾರ್ಡ್‍ನ ಮುಬಿನಾ ಬೀ ಅವರು ಚುನಾಯಿತರಾಗಿದ್ದಾರೆ.
ಸ್ಪಷ್ಟವಾದ ಬಹುಮತ ಪಡೆದಿರುವ ಕಾಂಗ್ರೆಸ್‍ನಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಮೇಯರ್ ಮತ್ತು ಉಪ ಮೇಯರ್ ಹುದ್ದೆಗೆ ಸಮರ್ಥರನ್ನು ಆಯ್ಕೆ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ.
ಆದರೆ, ಹೈಕಮಾಂಡ್ ಶಾಸಕ ಆರ್.ವಿ. ವೆಂಕಟೇಶ್ ಅವರ ನೇತೃತ್ವದಲ್ಲಿ ಒಮ್ಮತದ ನಿರ್ಧಾರ ಕೈಗೊಂಡು ಪಕ್ಷಕ್ಕಾಗಿ ಎರೆಡು ದಶಕಗಳ ಕಾಲ ಸೇವೆ ಸಲ್ಲಿಸಿರುವ ಪಿ. ಗಾದೆಪ್ಪ ಮತ್ತು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರುವ ಮುಬಿನಾ ಬೀ ಅವರನ್ನು ಮೇಯರ್ ಮತ್ತು ಉಪ ಮೇಯರ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿತ್ತು.
ಆರಂಭದಲ್ಲಿ ಬಿಜೆಪಿಯ ಕೋನಂಕಿ ತಿಲಕ್ ಅವರು ಮೇಯರ್ ಹುದ್ದೆಗೆ, ಶ್ರೀಮತಿ ಕಲ್ಪನಾ ಅವರು ಉಪ ಮೇಯರ್ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್‍ನ ಆಸೀಫ್ ಹಾಗೂ ಪಕ್ಷೇತರರಾಗಿ ಗೆಲುವು ಸಾಧಿಸಿ, ಕಾಂಗ್ರೆಸ್‍ನ ಸಹ ಸದಸ್ಯರಾಗಿದ್ದ ಮುಂಡ್ಲೂರು ಪ್ರಭಂಜನ್ ಕುಮಾರ್ ಅವರು ನಾಮಪತ್ರ ಸಲ್ಲಿಸಿದ್ದರು. ಪ್ರಭಂಜನ್ ಅವರು `ಮೇಯರ್ ಹುದ್ದೆ'ಗಾಗಿ ಕಾಂಗ್ರೆಸ್ ಮುಖಂಡರ ಜೊತೆ ತೀವ್ರ ಲಾಭಿ ನಡೆಸಿ, ಮನವೊಲಿಕೆಯ ನಂತರ ನಾಮಪತ್ರವನ್ನು ಹಿಂದಕ್ಕೆ ಪಡೆದರು. ಆಸೀಫ್ ಅವರೂ ನಾಮಪತ್ರವನ್ನು ಹಿಂದಕ್ಕೆ ಪಡೆದರು.
ಬಿಜೆಪಿ ಅಭ್ಯರ್ಥಿಗಳು ನಾಮಪತ್ರವನ್ನು ಹಿಂದಕ್ಕೆ ಪಡೆಯದ ಕಾರಣ ಮತದಾನ ನಡೆದು, ಕಾಂಗ್ರೆಸ್‍ನ ಪಿ. ಗಾದೆಪ್ಪ ಮತ್ತು ಮುಬಿನಾ ಬೀ ಅವರು ತಲಾ 28 ಮತಗಳನ್ನು ಪಡೆದಿದ್ದು, ಬಿಜೆಪಿಯ ಅಭ್ಯರ್ಥಿಗಳು ತಲಾ 13 ಮತಗಳನ್ನು ಪಡೆದರು.
ಕಲ್ಬುರ್ಗಿ ಪ್ರಾದೇಶಿಕ ಆಯುಕ್ತರಾದ ಜಹೀರಾ ನಸೀಮ್ ಅವರು ನೂತನ ಮೇಯರ್ ಮತ್ತು ಉಪ ಮೇಯರ್ ಅವರ ಆಯ್ಕೆಯನ್ನು ಘೋಷಣೆ ಮಾಡಿದರು. ಎಡಿಸಿ ಮಹಮ್ಮದ್ ಝುವೇರ್ ಅವರು ಸಹಾಯಕ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
ರಾಜ್ಯಸಭಾ ಸದಸ್ಯ ಡಾ. ಸಯ್ಯದ್ ನಾಸಿರ್, ಶಾಸಕರಾದ ನಾರಾ ಭರತರೆಡ್ಡಿ, ಬಿ. ನಾಗೇಂದ್ರ, ಲಿಡ್ಕರ್ ಅಧ್ಯಕ್ಷ ಮುಂಡ್ರಗಿ ನಾಗರಾಜ್, ಬುಡಾ ಅಧ್ಯಕ್ಷ ಜೆ.ಎಸ್. ಆಂಜನೇಯಲು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಕಾಶ್ ಹಾಗೂ ಕಾಂಗ್ರೆಸ್ ಮುಖಂಡ ಬಿ. ರಾಂಪ್ರಸಾದ್ ಹಾಗೂ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನೂತನ ಮೇಯರ್ ಆಗಿ ಆಯ್ಕೆಯಾದ ಪಿ. ಗಾದೆಪ್ಪ ಅವರು, ಜನಪರವಾದ ಆಡಳಿತವನ್ನು ನೀಡುತ್ತೇನೆ. ಕಾಂಗ್ರೆಸ್ ಪಕ್ಷವು ನನ್ನ ಎರೆಡು ದಶಕಗಳ ಪಕ್ಷ ನಿಷ್ಠೆಯನ್ನು ಗುರುತಿಸಿ ಮೇಯರ್ ಹುದ್ದೆಯನ್ನು ನೀಡಿದೆ. ಪಕ್ಷ ಮತ್ತು ಪಕ್ಷದ ಮುಖಂಡರು - ಕಾರ್ಯಕರ್ತರ ವಿಶ್ವಾಸದಿಂದಲೇ ಆಡಳಿತ ನಡೆಸುತ್ತೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್