
ಕೊಪ್ಪಳ, 15 ನವೆಂಬರ್ (ಹಿ.ಸ.) :
ಆ್ಯಂಕರ್ : ಕಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಡೇ ಕೇರ್ ಕಿಮೋಥೆರಪಿ ಚಿಕಿತ್ಸಾ ಸೇವೆಗಳು ಪ್ರಾರಂಭವಾಗಿರುವುದರಿ0ದ ಭವಿಷ್ಯದಲ್ಲಿ ಜಿಲ್ಲೆಯ ಕ್ಯಾನ್ಸರ್ ರೋಗಿಗಳಿಗೆ ಹಾಗೂ ಅವರ ಕುಟುಂಬಸ್ಥರಿಗೆ ಆರ್ಥಿಕವಾಗಿ, ಮಾನಸಿಕವಾಗಿ ಹಾಗೂ ವೈದ್ಯಕೀಯವಾಗಿ ತುಂಬಾ ಅನುಕೂಲವಾಗಲಿದೆ ಎಂದು ಕೊಪ್ಪಳ ಲೋಕಸಭಾ ಸದಸ್ಯರಾದ ಕೆ. ರಾಜಶೇಖರ ಹಿಟ್ನಾಳ್ ಅವರು ಹೇಳಿದರು.
ಕೊಪ್ಪಳ ನಗರದ ಪ್ರತಿಷ್ಠಿತ ಆರೋಗ್ಯ ಸಂಸ್ಥೆಯಾದ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆಯಲ್ಲಿ ಹುಬ್ಬಳ್ಳಿ ಸೂಪರ್ ಸ್ಪೆಷಾಲಟಿ ಆಸ್ಪತ್ರೆ ಇವರ ಸಹಯೋಗದೊಂದಿಗೆ ಪ್ರಾರಂಭಿಸಿರುವ ಬಡ ಕ್ಯಾನ್ಸರ್ ರೋಗಿಗಳ ಉಚಿತ ಡೇ ಕೇರ್ ಕಿಮೋಥೆರಪಿ ಚಿಕಿತ್ಸಾ ವಾರ್ಡ್ಗಳನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ ಜನರಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆಯು ಹೆಚ್ಚಾಗುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದೂರದ ಬೆಂಗಳೂರು ಅಥವಾ ಹುಬ್ಬಳ್ಳಿಯಂತಹ ನಗರಗಳಿಗೆ ಅಲೆದಾಡುವ ಪರಿಸ್ಥಿತಿ ಇದೆ. ಆದರೆ ಕೊಪ್ಪಳ ಕಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಡೇ ಕೇರ್ ಕಿಮೋಥೆರಪಿ ಚಿಕಿತ್ಸಾ ಸೇವೆಗಳು ಪ್ರಾರಂಭವಾಗಿರುವುದರಿ0ದ ಭವಿಷ್ಯದಲ್ಲಿ ಜಿಲ್ಲೆಯ ಕ್ಯಾನ್ಸರ್ ರೋಗಿಗಳು ದೂರದ ನಗರಗಳಿಗೆ ಚಿಕಿತ್ಸೆಗಾಗಿ ತೆರಳುವುದನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಣ ಮಾಡಬಹುದು. ಇದರಿಂದ ಅವರಿಗೆ ಆಗುವ ಆರ್ಥಿಕ ನಷ್ಟವನ್ನು ಸಹ ತಪ್ಪಿಸಬಹುದು ಎಂದು ತಿಳಿಸಿದರು.
ನಮ್ಮ ಜಿಲ್ಲೆಗೆ ಡೇ ಕೇರ್ ಕಿಮೋಥೆರಪಿ ಚಿಕಿತ್ಸಾ ಸೇವೆಗಳನ್ನು ಪ್ರಾರಂಭಿಸಲು ಶ್ರಮಿಸಿದ ಕಿಮ್ಸ್ ನಿರ್ದೇಶಕರಾದ ಡಾ. ವಿಜಯನಾಥ ಇಟಗಿ ಹಾಗೂ ಆಡಳಿತ ತಂಡದ ಜತೆಗೆ ಹುಬ್ಬಳ್ಳಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕರಾದ ಡಾ. ಜಗದೀಶ್ ತುಬಚಿ ಮತ್ತು ತಂಡಕ್ಕೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಕ್ಯಾನ್ಸರ್ ರೋಗದ ಬಗ್ಗೆ ಜಿಲ್ಲೆಯ ಜನರಿಗೆ ಹೆಚ್ಚು ಅರಿವು ಕಾರ್ಯಕ್ರಮಗಳನ್ನು ಮೂಡಿಸಲು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕಿಮ್ಸ್ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಬಿ. ಕಲ್ಲೇಶ, ವೈದ್ಯಕೀಯ ಅಧೀಕ್ಷಕ ಡಾ. ಮಂಜುನಾಥ ಸಾಲಿಮನಿ, ಶುಶ್ರೂಷಕ ಅಧೀಕ್ಷಕರಾದ ಸರಸ್ವತಿ, ನೋಡಲ್ ಅಧಿಕಾರಿ ಡಾ. ವೀರೇಶ, ಜಿ.ಸಿ ಸದಸ್ಯ ಸಲೀಂ ಅಳವಂಡಿ ಮತ್ತು ಬೋಧಕ, ಬೋಧಕೇತರ ಹಾಗೂ ಶುಶ್ರೂಷಕ ಸಿಬ್ಬಂದಿ ಉಪಸ್ಥಿತರಿದ್ದರು. ಡಾ. ಆನಂದ ಚವ್ಹಾಣ ರವರು ಕಾರ್ಯಕ್ರಮವನ್ನು ನಿರೂಪಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್