ಹುಬ್ಬಳ್ಳಿ, 09 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಗುತ್ತಿಗೆದಾರ ಮೋಹನ್ ಚವ್ಹಾಣ್ ಎಂಬವರ ಅಪಹರಣ ಪ್ರಕರಣದಲ್ಲಿ 10 ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬುಧವಾರ ಹುಬ್ಬಳ್ಳಿ ಗೋಕುಲ್ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುತ್ತಿಗೆದಾರ ಮೋಹನ್ ಚವ್ಹಾಣ್ ಎಂಬವರನ್ನು ಬಸಪ್ಪ ದಳವಾಯಿ ಸೇರಿದಂತೆ 15ಕ್ಕೂ ಅಧಿಕ ಜನರ ತಂಡ ಮಾರಕಾಸ್ತ್ರಗಳಿಂದ ಬೆದರಿಸಿ , ಹಲ್ಲೆ ಮಾಡಿ ಕಾರಿನಲ್ಲಿ ಅಪಹರಿಸಿದ್ದರು. ಈ ಕುರಿತು ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಅಪಹರಣಕ್ಕೆ ಒಳಗಾದ ಮೋಹನ್ ಸಹೋದರ ಅರವಿಂದ್ ಚವ್ಹಾಣ್ ದೂರು ನೀಡಿದ್ದರು ಎಂದು ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಧಾರವಾಡದ ಕೆ.ಸಿ.ಪಾರ್ಕ್ ಬಳಿ ಪ್ರಮುಖ ಆರೋಪಿ ಬಸಪ್ಪ ದಳವಾಯಿ ಸೇರಿದಂತೆ ಹತ್ತು ಜನರನ್ನು ವಶಕ್ಕೆ ಪಡೆದಿದ್ದಾರೆ ಎಂದರು.
ಅಪಹರಣಕ್ಕೆ ಒಳಗಾಗಿದ್ದ ಗುತ್ತಿಗೆದಾರ ಮೋಹನ್ ಚವ್ಹಾಣ್ನನ್ನು ಬೆಳಗಾವಿ ಜಿಲ್ಲೆ ಬೈಲಹೊಂಗಲ ಬಳಿ ರಕ್ಷಿಸಲಾಗಿದ್ದು, ಪ್ರಕರಣ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa