ನವದೆಹಲಿ, 06 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ವಸ್ತು ಎಸೆಯಲು ಯತ್ನಿಸಿದ ವಕೀಲನನ್ನು ಸ್ಥಳದಲ್ಲೇ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು 71 ವರ್ಷದ ವಕೀಲ ರಾಕೇಶ್ ಕಿಶೋರ್ ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ, ನ್ಯಾಯಮೂರ್ತಿ ಗವಾಯಿ ಅವರು ಹಿಂದಿನ ವಿಚಾರಣೆಯ ವೇಳೆ “ವಿಷ್ಣುವಿನ ಕುರಿತ ಹೇಳಿಕೆ” ನೀಡಿದ್ದರಿಂದ ಕಿಶೋರ್ ಅವರಿಗೆ ಬೇಸರವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯದ ಕಲಾಪ ನಡೆಯುತ್ತಿರುವಾಗ ಏನನ್ನಾದರೂ ಎಸೆಯಲು ಪ್ರಯತ್ನಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಕಾಪಾಡಲು ನ್ಯಾಯಾಲಯದ ಕೋಣೆಯಲ್ಲಿದ್ದ ದೆಹಲಿ ಪೊಲೀಸ್ ಕಾನ್‌ಸ್ಟೆಬಲ್ ತಕ್ಷಣ ಮಧ್ಯಪ್ರವೇಶಿಸಿ, ಕಿಶೋರ್ ಅವರನ್ನು ಹಿಡಿದು ಬಂಧಿಸಿದ್ದಾರೆ.
ಅವರನ್ನು ಹೊರಗೆ ಕರೆದುಕೊಂಡು ಹೋಗುತ್ತಿದ್ದಾಗ, ಅವರು “ಸನಾತನ ಧರ್ಮದ ಅವಮಾನವನ್ನು ಭಾರತ ಸಹಿಸುವುದಿಲ್ಲ” ಎಂದು ಘೋಷಣೆ ಹಾಕಿದ್ದಾರೆ.
ಘಟನೆಯ ನಡುವೆಯೂ ಮುಖ್ಯ ನ್ಯಾಯಮೂರ್ತಿ ಗವಾಯಿ ಶಾಂತರಾಗಿದ್ದು, “ಇಂತಹ ಘಟನೆಗಳು ನ್ಯಾಯಾಂಗದ ಕಾರ್ಯಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ” ಎಂದು ಹೇಳಿ ವಿಚಾರಣೆಯನ್ನು ಎಂದಿನಂತೆ ಮುಂದುವರಿಸಿದರು.
ಪೊಲೀಸರು ವಕೀಲ ರಾಕೇಶ್ ಕಿಶೋರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ನ್ಯಾಯಾಲಯದ ಭದ್ರತೆಯ ಮೇಲಿನ ನಿಗಾವನ್ನು ಹೆಚ್ಚಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa